ಮಂಗಳೂರು ಆಟೋ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳಿಂದ ನಿಷೇಧಿತ ಪಿಎಫ್ಐ ಸಂಘಟನೆ ಮುಖಂಡನ ವಶಕ್ಕೆ
ಮಂಗಳೂರು-ಆಟೋ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ನಿಷೇಧಿತ ಪಿಎಫ್ಐ ಸಂಘಟನೆ ಮುಖಂಡನೋರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪಿಎಫ್ಐ ಮುಖಂಡ ಇಜಾಜ್ ಎಂಬಾತನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದಿರುವ ಪಿಎಫ್ಐ ಮುಖಂಡ ಇಜಾಜ್ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನಿವಾಸಿ ಎಂದು ತಿಳಿದು ಬಂದಿದೆ. ಪಿಎಫ್ಐ ನಿಷೇಧವಾದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪಿಎಫ್ಐ ಮುಖಂಡರನ್ನು ಬಂಧಿಸಲಾಗಿತ್ತು. ಈ ವೇಳೆ ಬಂಧಿತನಾಗಿದ್ದ ಈತ 10 ದಿನಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದನು. ಈ ಮಧ್ಯೆ ಇಂದು ದುಬೈಗೆ ಹಾರಲು ಪಿಎಫ್ಐ ಮುಖಂಡ ಇಜಾಜ್ ಪ್ಲಾನ್ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.
ಆಸ್ಪತ್ರೆಯಲ್ಲಿಯೂ ಗಾಯಾಳುಗಳಿಗೆ ಚಿಕಿತ್ಸೆ
ಆಟೋ ಸ್ಪೋಟದಲ್ಲಿ ಗಾಯಗೊಂಡಿರುವ ಅನುಮಾನಾಸ್ಪದ ವ್ಯಕ್ತಿ ಹಾಗೂ ಚಾಲಕ ಪುರುಷೋತ್ತಮ್ ಗೆ ಚಿಕಿತ್ಸೆ ಫಾದರ್ ಮುಲ್ಲಾರ್ ಆಸ್ಪತ್ರೆಯ ಐಸಿಯು ಬರ್ನಿಂಗ್ ವಾರ್ಡ್ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಐಸಿಯು ಹೊರಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಚಾಲಕ ಪುರುಷೋತ್ತಮ್ ಪತ್ನಿ ಹಾಗೂ ಕುಟುಂಬಸ್ಥರನ್ನು ಸಹ ಪೊಲೀಸರು ಆಸ್ಪತ್ರೆಯೊಳಗೆ ಬಿಡುತ್ತಿಲ್ಲ.
ಮೈಸೂರಿನ ನಿವಾಸದ ಬಳಿ ಪೊಲೀಸ್ ಭದ್ರತೆ
ಅನುಮಾನಾಸ್ಪದ ಗಾಯಾಳು ವಾಸವಾಗಿದ್ದ ಮೈಸೂರಿನ ನಿವಾಸದ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಮೈಸೂರಿನ ಮೇಟಗಳ್ಳಿಯ ಲೋಕನಾಯಕ ನಗರದ 10ನೇ ಕ್ರಾಸ್ನಲ್ಲಿ ಶಂಕಿತ ವ್ಯಕ್ತಿ ವಾಸವಾಗಿದ್ದನು. ಈ ವೇಳೆ ಮನೆಯ ಮಾಲೀಕರಿಗೆ ನಾನು ಹುಬ್ಬಳ್ಳಿ ಮೂಲದವನು ಎಂದು ಹೇಳಿ ಪ್ರೇಮ್ರಾಜ್ ಹೆಸರಿನ ನಕಲಿ ಆಧಾರ್ ಕಾರ್ಡ್ ನೀಡಿದ್ದನು ಎಂದು ತಿಳಿದು ಬಂದಿದೆ.
ನಕಲಿ ಆಧಾರ್ ಕಾರ್ಡ್ ಬಳಕೆ
ಮಂಗಳೂರು ಆಟೋ ಸ್ಫೋಟಕ್ಕೆ ಸಂಬಂಧಿಸಿದಂತೆ ಗಾಯಗೊಂಡಿರುವ ಪ್ರಯಾಣಿಕನ ಬಳಿ ಪತ್ತೆಯಾದ ಆಧಾರ್ ಕಾರ್ಡ್ ನಕಲಿ ಎಂದು ಗೊತ್ತಾಗಿದೆ. ಆಧಾರ್ ಕಾರ್ಡ್ ನಲ್ಲಿರುವ ಹೆಸರು, ವಿಳಾಸ ಮತ್ತು ಆಧಾರ್ ಸಂಖ್ಯೆ ಎಲ್ಲವೂ ಸತ್ಯ. ಆದರೆ ಫೋಟೋ ಮಾತ್ರ ನಕಲಿ ಎಂಬುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
ಆಧಾರ್ ಕಾರ್ಡ್ನಲ್ಲಿರುವ ಅಸಲಿ ಪ್ರೇಮ್ರಾಜ್ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದು, ತುಮಕೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಹುಬ್ಬಳ್ಳಿ ಮೂಲದ ಪ್ರೇಮ್ರಾಜ್ ಪೋಷಕರು ಕಳೆದ 25 ವರ್ಷಗಳಿಂದ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ನಕಲಿ ಆಧಾರ್ ಕಾರ್ಡ್ ಬಳಸಿಯೇ ಈ ಪ್ರಯಾಣಿಕ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದುಕೊಂಡಿದ್ದನು.
ಆಧಾರ್ ಕಾರ್ಡ್ನಲ್ಲಿರುವ ಫೋಟೋ ನಕಲಿ
ಪ್ರೇಮ್ರಾಜ್ ತಂದೆ ಮಾರುತಿ, ಶನಿವಾರ ರಾತ್ರಿ ಕೇಶವಾಪುರ ಠಾಣೆಯ ಹಿರಿಯ ಪೊಲೀಸರು ಮನೆಗೆ ಬಂದಿದ್ದರು. ಆಧಾರ್ ಕಾರ್ಡ್ ತೋರಿಸಿ ಕೆಲ ಮಾಹಿತಿಗಳನ್ನು ಕೇಳಿದ್ದರು. ಆಧಾರ್ ಕಾರ್ಡ್ನಲ್ಲಿರುವ ಸಂಖ್ಯೆ, ಹೆಸರು ಮತ್ತು ವಿಳಾಸ ಎಲ್ಲವೂ ನಿಜ ಆಗಿತ್ತು. ಆದ್ರೆ ಆಧಾರ್ ಕಾರ್ಡ್ನಲ್ಲಿರುವ ಫೋಟೋ ನಮ್ಮ ಮಗನದ್ದು ಆಗಿರಲಿಲ್ಲ ಎಂದು ಹೇಳಿದರು.
ಆಟೋ ಸ್ಫೋಟದ ಹಿಂದೆ ಉಗ್ರರ ಕೈವಾಡ
ಮಂಗಳೂರಿನ ನಾಗುರಿಯಲ್ಲಿ ನಡೆದ ಆಟೋ ಸ್ಫೋಟದ ಹಿಂದೆ ಉಗ್ರರ ಕೈವಾಡ ಇರೋದು ದೃಢವಾಗಿದೆ. ಇದು ಅನಿರೀಕ್ಷಿತವಾಗಿ ಸ್ಪೋಟಗೊಂಡಿದ್ದಲ್ಲ. ಇದೊಂದು ಉಗ್ರ ಕೃತ್ಯ ಎಂದು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.