ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಟೈಗರ್ಸ್ ಫ್ರೆಂಡ್ಸ್ ಉಡುಪಿ ವತಿಯಿಂದ ಈ ಬಾರಿ 3ನೇ ವರ್ಷದ ಅಬ್ಬರದ ಉಡುಪಿ ಪಿಲಿನಲಿಕೆ – ಸಾಂಪ್ರದಾಯಿಕ ಹುಲಿವೇಷ ಕುಣಿತ ಸ್ಪರ್ಧೆ ಆಯೋಜನೆ
ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಟೈಗರ್ಸ್ ಫ್ರೆಂಡ್ಸ್ ಉಡುಪಿ ವತಿಯಿಂದ ಈ ಬಾರಿ 3ನೇ ವರ್ಷದ ಅಬ್ಬರದ ಉಡುಪಿ ಪಿಲಿನಲಿಕೆ – ಸಾಂಪ್ರದಾಯಿಕ ಹುಲಿವೇಷ ಕುಣಿತ ಸ್ಪರ್ಧೆ ಮತ್ತು ಪ್ರದರ್ಶನವನ್ನು ಆ.26ರಂದು ಕುಂಜಿಬೆಟ್ಟು ಮೀನು ಮಾರುಕಟ್ಟೆ ಬಳಿ ಆಯೋಜಿಸಲಾಗಿದೆ.ಈ ಬಗ್ಗೆ ಬುಧವಾರ ಸಂಘಟನೆಯ ಗೌರವಾಧ್ಯಕ್ಷ ಹರೀಶ್ ಕುಮಾರ್ ಸುದ್ದಿಗೋಷ್ಛಿಯಲ್ಲಿ ಮಾಹಿತಿ ನೀಡಿದರು.
ಹುಲಿವೇಷ ಕುಣಿತ ಸ್ಪರ್ಧೆಯಲ್ಲಿ ಮೊದಲ 3 ಸ್ಥಾನ ವಿಜೇತ ತಂಡಗಳಿಗೆ ಕ್ರಮವಾಗಿ 1,00,001 ರು., 50,0001 ಮತ್ತು 5001 ರು. ನಗದು ಬಹುಮಾನ ಹಾಗೂ ಶಾಶವತ ಫಲಕಗಳನ್ನು ನೀಡಿ ಗೌರವಿಸಲಾಗುತ್ತದೆ. ಅಲ್ಲದೇ 2 ವಿಭಾಗಗಳಲ್ಲಿ ಮುದ್ದುಕೃಷ್ಣ ವೇಷ ಸ್ಪರ್ಧೆಯೂ ನಡೆಯಲಿದೆ ಎಂದವರು ಹೇಳಿದರು.
ಸ್ಪರ್ಧೆಯನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಲಿದ್ದು, ವಿಧಾನಸಭಾ ಸಭಾಪತಿ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ. ದೊಡ್ಡಣಗುಡ್ಡೆ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ, ಶಂಕರಪುರದ ದ್ವಾರಕಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ, ಕನ್ನರ್ಪಾಡಿಯ ಸೈಂಟ್ ಮೇರಿಸ್ ಸಾಲೆಯ ಪ್ರಾಂಶುಪಾಲ ಫಾ. ವಿಜಯ ಜಾನ್ಸನ್ ಡಿಸೋಜ ಮತ್ತು ಉಡುಪಿ ಅಂಜುಮಾನ್ ಮಸೀದಿಯ ಧರ್ಮಗುರು ಮೌಲಾ ಅಲಿ ರಜ್ವಿ ಆಶೀರ್ವಚನ ನೀಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಉದ್ಯಮ ನಾಡೋಜ ಜಿ.ಶಂಕರ್ ಹಾಗೂ ವಿಶೇಷ ಅಥಿತಿಗಳಾಗಿ ನಟ ಕಾರ್ತಿಕ್ ಸಾಮಾಗ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ದೀಕ್ಷಾ ಬ್ರಹ್ಮಾವರ,ಅಧಿಪತಿ, ಅನರ್ ಕಲಿ, ಕಲ್ಜಿಗ ಚಿತ್ರತಂಡಗಳು ಮತ್ತು ಇತರ ಗಣ್ಯರು ಆಗಮಿಸಲಿದ್ದಾರೆ ಎಂದವರು ಹೇಳಿದರು.
ಸಂಘಟನೆಯ ಅಧ್ಯಕ್ಷ ಶಶಿರಾಜ್ ಕುಂದರ್ ಅವರು, ಉಡುಪಿಯ ಸಾಂಪ್ರದಾಯಿಕ ಹುಲಿವೇಷ ಕುಣಿತ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಒಟ್ಟು 13 ಆಯ್ದ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಭೋಜ ಶೇರಿಗಾರ್, ಹರೀಶ್ ಪೂಜಾರಿ ಮತ್ತು ರೂಪೇಶ್ ಕಲ್ಮಾಡಿ ಉಪಸ್ಥಿತರಿದ್ದರು.