ಉಡುಪಿ-ನಿವೃತ್ತ ಶಿಕ್ಷಕರೊಬ್ಬರಿಗೆ ಪೆನ್ಶನ್ ಹಣವನ್ನು ಬಿಡುಗಡೆಗೊಳಿಸಲು ಲಂಚ ಪಡೆಯುತ್ತಿದ್ದ ವೇಳೆ ಉಡುಪಿ ಖಜಾನೆಯ ಉಪನಿರ್ದೇಶಕರು ಹಾಗೂ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶನಿವಾರ ನಡೆದಿದೆ.
ನಿವೃತ್ತ ಶಿಕ್ಷಕ ಹಿತೇಂದ್ರ ಭಂಡಾರಿ ಎಂಬವರು ತಮ್ಮ ಪೆನ್ಶನ್ ಹಣವನ್ನು ಪಡೆಯಲು ಕಳೆದ 5 ತಿಂಗಳಿನಿಂದ ಖಜಾನೆಯ ಉಪನಿರ್ದೇಶಕರಾದ ರವಿಕುಮಾರ್ ಮತ್ತು ಸಹಾಯಕ ರಾಘವೇಂದ್ರ ಎಂಬವರು ಸತಾಯಿಸುತ್ತಿದ್ದು ರೂ 5000 ಲಂಚ ನೀಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಹಿತೇಂದ್ರ ಭಂಡಾರಿಯವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಹಿತೇಂದ್ರ ಭಂಡಾರಿಯವರ ದೂರಿನಂತೆ ಶನಿವಾರು ಉಡುಪಿ ಪ್ರಭಾರ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್ ಅವರ ತಂಡ ಹಾಗೂ ಮಂಗಳೂರು ಲೋಕಾಯುಕ್ತ ಪಿಐ ಪಿ ಸುರೇಶ್ ಹಾಗೂ ಕೆ ಎನ್ ಚಂದ್ರ ಶೇಖರ್ ಅವರನ್ನೊಳಗೊಂಡ ತಂಡ ಲಂಚ ಸ್ವೀಕರಿಸುತ್ತಿದ್ದ ವೇಳೆ ಖಜಾನೆಯ ಉಪನಿರ್ದೇಶಕರಾದ ರವಿಕುಮಾರ್ ಮತ್ತು ಸಹಾಯಕ ರಾಘವೇಂದ್ರ ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಸಿಬಂದಿಗಳಾದ ನಾಗರಾಜ, ಸತೀಶ್, ಪ್ರಸನ್ನ, ರಮೇಶ್, ಸೂರಜ್, ಸುಧೀರ್, ರಾಘವೇಂದ್ರ, ಪುಷ್ಪಲತಾ, ಮಲ್ಲಿಕಾ ಭಾಗವಹಿಸಿದ್ದರು.