ಮೆದುಳು ಜ್ವರಕ್ಕೆ ಜಪಾನೀಸ್ ಎನ್ಸಿಫಲಾಟಿಸ್ ಲಸಿಕೆ ಅಭಿಯಾನ:ಶ್ರೀ ಗುರು ಮಂಟೇಶ್ವರ ಪ್ರೌಢ ಶಾಲೆಯ 1 ರಿಂದ 15 ವರ್ಷದ ಮಕ್ಕಳಿಗೆ ಲಸಿಕೆ
ಕೆಲೂರ:ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ ಶ್ರೀ ಗುರು ಮಂಟೇಶ್ವರ ಪ್ರೌಢ ಶಾಲೆಯ ಮಕ್ಕಳಿಗೆ ವೈರಾಣುವಿನಿಂದ ಬರುವ ಮೆದುಳು ಜ್ವರಕ್ಕೆ ಜಪಾನೀಸ್ ಎನ್ಸಿಫಲಾಟಿಸ್ ಲಸಿಕಾ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಸಸಿಗೆ ನೀರುಣಿಸುವುದರ ಮೂಲಕ ಚಾಲನೆ ನೀಡಿದರು.
ಮೆದುಳು ಜ್ವರ ತಡೆಗಟ್ಟುವ ನಿಟ್ಟಿನಲ್ಲಿ ಡಿ. 5 ರಿಂದ 25ರ ವರೆಗೆ ಬಾಗಲಕೋಟೆ ಜಿಲ್ಲೆಯಾದ್ಯಂತ 1 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಜಪಾನೀಸ್ ಎನ್ಸಿಫಲಾಟಿಸ್ ಲಸಿಕೆ ನೀಡಲು ಅಭಿಯಾನ ಹಮ್ಮಿಕೊಂಡಿದ್ದು, ಮಕ್ಕಳು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ತಿಳಿಸಿದರು.
ಇಂದು ಕೆಲೂರ ಗ್ರಾಮದ ಶ್ರೀ ಗುರು ಮಂಟೇಶ್ವರ ಪ್ರೌಢ ಶಾಲೆಯ ಮಕ್ಕಳಿಗಾಗಿ ಹಮ್ಮಿಕೊಂಡ ಲಸಿಕಾ ಅಭಿಯಾನ ಉದ್ದೇಶಿಸಿ ಮಾತನಾಡಿದ ಅವರು, ಲಸಿಕೆ ಸುರಕ್ಷಿತವಾಗಿದ್ದು, ಮಕ್ಕಳಲ್ಲಿ ಯಾವುದೇ ಭಯ, ಗೊಂದಲ ಬೇಡ ಎಂದರು.
ಮಕ್ಕಳಲ್ಲಿ ನರ ದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಜೆಇ ಮೆದುಳು ಜ್ವರ (ಜಪಾನೀಸ್ ಎನ್ ಸೆಫಲೈಟಿಸ್) ನಿಯಂತ್ರಣಕ್ಕಾಗಿ ಡಿಸೆಂಬರ್ 5 ರಿಂದ ವಿಶೇಷ ಲಸಿಕಾ ಅಭಿಯಾನ ಆರಂಭವಾಗಿದೆ.ಜೆಇ ಮೆದುಳು ಜ್ವರ ‘ಪ್ಲೇವಿವೈರಸ್’ ಎಂಬ ವೈರಾಣುವಿನಿಂದ ಬರುತ್ತದೆ. ಇದು ಕ್ಯುಲೆಕ್ಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಹಂದಿಗಳು ಮತ್ತು ಕಾಡಿನ ಪಕ್ಷಿಗಳಲ್ಲಿರುವ ಈ ವೈರಾಣುವಿಗೆ ಮಾನವರು ಕಟ್ಟಕಡೆಯ ಹೋಸ್ಟ್ ಆಗಿರುತ್ತಾರೆ.
ಈ ಸಂದರ್ಭದಲ್ಲಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಬಿ.ಹೆಳವರ,ಆರೋಗ್ಯ ಇಲಾಖೆಯ ಸಿ.ಹೆಚ್.ಓ ಶ್ರೀಮತಿ ಪುಷ್ಪಾ ನಾಗಲೋಟಿಮಠ,ಪಿ.ಹೆಚ್.ಸಿ.ಓ ಶ್ರೀಮತಿ ಅನ್ನಪೂರ್ಣಾ ಮಡಿವಾಳರ,ಹೆಚ್.ಆಯ್.ಓ ಆದ ಬಿ.ಆರ್.ಪಾಟೀಲ, ಶಿಕ್ಷಕರಾದ ಎಮ್.ಹೆಚ್.ಗ್ವಾಗೇರಿ,ಬಿ.ಎಸ್.ಕಮತರ,ವಾಯ್.ಎಸ್.ವಾಲಿಕಾರ,ಕುಶ ಬೀಳಗಿ,ಶ್ರೀಮತಿ ಪಿ.ಎನ್.ಸಂಗಾನವರ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.ಬಿ.ಹೆಚ್.ನಾಲತವಾಡ ಶಿಕ್ಷಕರು ಸ್ವಾಗತಿಸಿ ವಂದಿಸಿದರು.