ನವಾಯತ್ ಕಾಲೋನಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬಿಸಿಯೂಟ ಆಹಾರ ತಯಾರಿಕಾ ಸ್ಪರ್ಧೆ
ಭಟ್ಕಳ: ಪ್ರಧಾನ ಮಂತ್ರಿ ಪೋಷಣ ಶಕ್ತಿ ಯೋಜನೆಯಡಿ ಭಟ್ಕಳ ತಾಲೂಕಿನ ನವಾಯತ್ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಬಿಸಿಯೂಟ ತಯಾರಕರಿಗಾಗಿ ಆಹಾರ ತಯಾರಿಕಾ ಸ್ಪರ್ಧೆಯನ್ನು ನವಾಯತ್ ಕಾಲೋನಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಆಲ್ ಇಂಡಿಯಾ ಐಡಿಯಲ್ ಟೀರ‍್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ, ಸರ್ಕಾರದ ಮಹತ್ವದ ಯೋಜನೆಯಾಗಿರುವ ಬಿಸಿಯೂಟ ತಯಾರಿಕೆಯಲ್ಲಿ ನಾವಿನ್ಯತೆಯನ್ನು ತರುವ ಇಂತಹ ಸ್ಪರ್ಧೆಗಳಿಂದಾಗಿ ಬಿಸಿಯೂಟ ತಯಾರಕರಲ್ಲಿ ಒಂದು ರೀತಿಯ ಉತ್ಸಾಹ ಮೂಡುತ್ತದೆ ಮತ್ತು ಅವರಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಅಡುಗೆಯನ್ನು ತಯಾರಿಸಲು ಪ್ರೋತ್ಸಾಹ ದೊರಕುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ನವಾಯತ್ ಕಾಲೋನಿ ಕ್ಲಸ್ಟರ್ ಸಂಪನ್ಮೂಲಾಧಿಕಾರಿ ಶ್ರೀಮತಿ ಮುನಿರಾ ಖತ್ತಾಲಿ, ಇರುವಂತಹ ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳಿಗೆ ರುಚಿಶುಚಿಯಾದ ಅಡುಗೆ ಸಿದ್ದಗೊಳಿಸಲು ಇಂತಹ ಸ್ಪರ್ಧೆಗಳಿಂದ ಸಾಧ್ಯವಾಗುತ್ತದೆ. ಕೇವಲ ಸ್ಪರ್ಧೆಗಳು ನಡೆಸುವುದಷ್ಟೆ ಇದರ ಉದ್ದೇಶವಲ್ಲ ಬದಲಾಗಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಯಾವ ರೀತಿಯ ಅಡುಗೆಯನ್ನು ಸಿದ್ದಗೊಳಿಸಬಹುದು ಎಂಬುದನ್ನು ತಿಳಿಸಿಕೊಡುವುದು ಸೇರಿದೆ ಎಂದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಹಿದ್ದೀನ್ ಖತ್ತಾಲಿ, ಅಬ್ದುಲ್ ಕಾದಿರ್ ಡಾಂಗಿ ಉಪಸ್ಥಿತರಿದ್ದರು.
ಗಾಲೀಬ್ ಔಟಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.