ಅನ್ಯರು, ನಮ್ಮವರು ಎಂಬ ವಿಭಜೆಯಿಂದಾಗಿ ಸಮಾಜದ ನೆಮ್ಮದಿ ಹಾಳಾಗುತ್ತಿದೆ-ಮುಹಮ್ಮದ್ ಕುಂಞಿ
ಭಟ್ಕಳ: ಸಮಾಜದಲ್ಲಿ ಅನ್ಯರು, ನಮ್ಮವರು ಎಂಬ ವಿಭಜನಾಕಾರಿ ವಿಚಾರಗಳು ಬೆಳೆದು ಬರುತ್ತಿದ್ದು ಇದರಿಂದಾಗಿ ಸಮಾಜದ ನೆಮ್ಮದಿ ಹಾಳಾಗುತ್ತಿದೆ ಎಂದು ಸದ್ಭಾವನಾ ಮಂಚ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಬೇಸರ ವ್ಯಕ್ತಪಡಿಸಿದರು.
ಅವರು ಗುರುವಾರ ಸಂಜೆ ಇಲ್ಲಿನ ಬಂದರ್ ರಸ್ತೆಯಲ್ಲಿರುವ ಹೊಟೇಲ್ ರಾಯಲ್ ಓಕ್ ನಲ್ಲಿ ಜರಗಿದ ಸದ್ಭಾವನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದ ಅನ್ಯರು ಎಂಬುದು ಯಾರೂ ಇಲ್ಲ ಮತ್ತು ಇರಲೂ ಬಾರದು ಎಂದ ಅವರು, ಧರ್ಮದಲ್ಲಿ ಸ್ವದೇಶಿ ವಿದೇಶಿ ಧರ್ಮ ಎಂಬುದಿಲ್ಲ. ಧರ್ಮ ಎಂದರೆ ಜನರ ನಂಬಿಕೆ ಜನರಿಗೆ ಬೆಳಕು ತೋರಿಸುವ ಮಾರ್ಗ. ತಮಗೆ ಸರಿ ಕಂಡಿದ್ದನ್ನು ಒಪ್ಪಿಕೊಳ್ಳುವುದು, ತಿರಸ್ಕರಿಸುವುದು ಜನರ ಮನಸ್ಸಿಗೆ ಬಿಟ್ಟಿದ್ದು, ಭಾರತದಲ್ಲಿಯೆ ಹುಟ್ಟಿದ ಅಪ್ಪಟ ಬೌದ್ಧ ಧರ್ಮವನ್ನು ಇಲ್ಲಿ ಕೇವಲ ೧% ಜನರು ಮಾತ್ರ ನಂಬುತ್ತಾರೆ ಆದರೆ ತೈವಾನ್ ಮತ್ತು ಥೈಲಾಂಡ್ ನ ಅಧಿಕೃತ ಧರ್ಮ ಬೌದ್ಧ ಧರ್ಮವಾಗಿದೆ. ಅಲ್ಲಿನ ಜನರು ಇದು ವಿದೇಶಿ ಧರ್ಮ ಎಂದು ಎಲ್ಲೋ ಹೇಳಿಲ್ಲ. ಆದ್ದರಿಂದ ಧರ್ಮ ಮತ್ತು ನಂಬಿಕೆಗಳಿಗೆ ಗಡಿಗಳೆಂಬುದು ಇಲ್ಲ ಎಂದರು. ಸ್ವದೇಶಿ, ವಿದೇಶಿ, ಅನ್ಯರು, ಅಪರಿಚಿತರು ಎಂಬ ವಿಭಜನೆ ಸರಿಯಲ್ಲ. ವೈವಿಧ್ಯತೆಯೊಂಬುದು ಪಕೃತಿಯ ನಿಯಮ. ಒಬ್ಬರು ಇನ್ನೊಬ್ಬರ ಹಾಗೆ ಇರಲು ಸಾಧ್ಯವಿಲ್ಲ ಹಾಗಾಗಿ ನಾವೆಲ್ಲರೂ ಅನ್ನರು ಎಂಬ ತೀರ್ಮಾನಕ್ಕೆ ಬಂದರೆ ಜಗತ್ತಿನಲ್ಲಿ ನಾವೆಲ್ಲರೂ ಬದುಕಲಿಕ್ಕೆ ಸಾಧ್ಯವಿಲ್ಲ ಇಂತಹ ವೈವಿದ್ಯತೆಯನ್ನು ನಾವೆಲ್ಲರೂ ಒಪ್ಪಿಕೊಂಡು, ಒಬ್ಬರು ಇನ್ನೊಬ್ಬರನ್ನು ಗೌರವಿಸಿ ವೈವಿಧ್ಯತೆಯನ್ನು ಸಂಭ್ರಮಿಸಬೇಕು ಎಂದು ಕರೆ ನೀಡಿದರು. ಸದ್ಭಾವನಾ ಮಂಚ್ ಮೂಲಕ ರಾಷ್ಟ್ರದಾದ್ಯಂತ ಪ್ರತಿಯೊಂದು ಮೋಹಲ್ಲಾ ಕೇರಿಗಳಲ್ಲಿರು ಪರಸ್ಪರ ಹಿಂದೂ-ಮುಸ್ಲಿಮ್ ಸಮುದಾಯಗಳಲ್ಲಿ ಸದ್ಭಾವನೆ, ಸಹೋದರತ್ವ, ಪ್ರೀತಿ, ವಿಶ್ವಾಸವನ್ನು ಬೆಳೆಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದ ಭಟ್ಕಳದ ಸದ್ಭಾವನಾ ಮಂಚ್ ನ ಅಧ್ಯಕ್ಷ ಸತೀಶ್ ಕುಮಾರ್, ಸಮಾಜದಲ್ಲಿ ಶಾಂತಿ ಬಯಸುವವರು ಶೇ.೯೦ ರಷ್ಟು ಜನರಿದ್ದಾರೆ. ಆದರೆ ಅವರ ಮೌನದಿಂದಾಗಿ ಗಲಭೆ, ಗೊಂದಲ ಸೃಷ್ಟಿಸುವವ ಗೌಜಿ ಗದ್ದಲಗಳು ಹೆಚ್ಚಾಗಿ ಕೇಳಿಸುತ್ತಿವೆ ಸಮಾಜದ ಶಾಂತಿಯನ್ನು ಕೆದಡಿ ಅದರ ದುರ್ಲಾಭ ಪಡೆಯುವ, ರಾಜಕೀಯ ಪ್ರೇರಿತ ಮನಸ್ಸುಗಳನ್ನು ನಾವು ದೂರವಿಡಬೇಕು ಎಂದರು. ಸಜ್ಜನ, ಸಚ್ಚಾರಿತ್ರ್ಯದ ಮುಖವಾಡ ಧರಿಸಿ ಮೆರೆಯುತ್ತಿರುವವ ಮುಖವಾಡಗಳು ಕಳಚಿಕೊಳ್ಳುತ್ತಿವೆ. ನಮ್ಮಲ್ಲಿನ ಸಂಯಮವನ್ನು ಕಾಪಾಡಿಕೊಳ್ಳುವುದರ ಮೂಲಕ ಸಮಾಜದಲ್ಲಿ ಶಾಂತಿ ಸೌಹಾರ್ದತೆಗೆ ನಾವೆಲ್ಲ ಶ್ರಮಿಸೋಣ ಎಂದು ಅವರು ಕರೆ ನೀಡಿದರು.
ಸದ್ಭಾವನಾ ಮಂಚ್ ಕಾರ್ಯದರ್ಶಿ ಎಂ.ಆರ್.ಮಾನ್ವಿ ಕಾರ್ಯಕ್ರಮ ನಿರೂಪಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ. ಧನ್ಯವಾದ ಅರ್ಪಿಸಿದರು.
ಸದ್ಭಾವನಾ ಮಂಚ್ ಗೌರವಾಧ್ಯಕ್ಷ ಮೌಲಾನ ಮುನವರ್ ಪೇಶಮಾಮ್,ತಂಝೀಮ್ ಪ್ರ.ಕಾ. ಅಬ್ದುಲ್ ರಖೀಬ್ ಎಂ.ಜೆ, ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಮುಹಮ್ಮದ್ ತಲ್ಹಾ ಸಿದ್ದಿಬಾಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.