ತೆಂಗಿನಗುಂಡಿ ಬೀಚ್ ಹೆಸರು ಬದಲಾವಣೆ ಹುನ್ನಾರ; ಸಾರ್ವಜನಿಕರಿಂದ ತಾ.ಪಂ. ಇ.ಒಗೆ ಮನವಿ
ಭಟ್ಕಳ: ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿ ಕಡಲ ತೀರದ ಹೆಸರು ಬದಲಾಯಿಸುವ ಪ್ರಯತ್ನ ನಡೆಯುತ್ತಿದ್ದು ಅದನ್ನು ಕೂಡಲೆ ನಿಲ್ಲಿಸಬೇಕು ಎಂದು ಆಗ್ರಹಿಸಿ ತೆಂಗಿನಗುಂಡಿ ಕಡಲತೀರದ ಬಳಿ ವಾಸಿಸುತ್ತಿರುವ ಮೀನುಗಾರ ಸಮುದಾಯ ಹಾಗೂ ಸಾರ್ವಜನಿಕರು ತಾಲೂಕಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ನೂರಾರು ವರ್ಷಗಳಿಂದ ತೆಂಗಿನಗುಂಡಿ ಬೀಚ್ ಎಂದೇ ಖ್ಯಾತಿ ಹೊಂದಿರುವ ಇಲ್ಲಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ಕಡಲಕಿನಾರೆಗೆ ಅದರ ಹೆಸರನ್ನು ಬದಲಾಯಿಸುವ ಪ್ರಯತ್ನ ಕೆಲ ಸಮಯದಿಂದ ನಡೆಯುತ್ತಿದ್ದು, ಇದರಿಂದಾಗಿ ಈ ಭಾಗದಲ್ಲಿ ಪರಸ್ಪರ ಸಮುದಾಯಗಳಲ್ಲಿ ಭಿನ್ನಾಭಿಪ್ರಾಯ ಮೂಡಲು ಕಾರಣವಾಗಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿರುವ ಸಾರ್ವಜನಿಕರು ಇದಕ್ಕೆ ಅವಕಾಶ ಮಾಡಿಕೊಡಬಾರದೆಂದು ತಾ.ಪಂ. ಸಿ.ಇ.ಒ ರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಭಾಗದಲ್ಲಿ ಹೊಸ ಹೆಸರಿನ ಸೂಚನಾ ಫಲಕಗಳನ್ನು ಹಾಕಲಾಗಿದೆ. ಇದರ ವಿರುದ್ಧ ಧ್ವನಿ ಎತ್ತಿದ ನಂತರ ಕೆಲವು ಫಲಕಗಳನ್ನು ತೆರವುಗೊಳಿಸಲಾಗಿದೆ, ಆದರೆ ಇನ್ನೂ ಅನೇಕ ನಾಮಫಲಕಗಳು ವಿವಿಧ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿ ಕಚೇರಿಗೆ ಹಲವು ಬಾರಿ ದೂರು ಸಲ್ಲಿಸಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತು ಈಗ ತೆಂಗಿನಗುಂಡಿ ಯನ್ನು ಒಳಗೊಳಗೆ ಮರುನಾಮಕರಣ ಮಾಡಲು ಸಂಪೂರ್ಣ ಸಿದ್ಧತೆ ಅಧಿಕೃತವಾಗಿ ನಡೆಯುತ್ತಿದೆ ಎಂದು ಮನವಿ ಪತ್ರದಲ್ಲಿ ದೂರಲಾಗಿದೆ. ಇಂತಹ ಕ್ರಮದಿಂದ ಸಮಸ್ಯೆಗಳು ಸೃಷ್ಟಿಯಾಗಲಿದ್ದು, ಭಿನ್ನಾಭಿಪ್ರಾಯಗಳ ಸರಮಾಲೆಯೇ ಅಸಮಾಧಾನಕ್ಕೆ ಕಾರಣವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದ್ದರಿಂದ ಇಂತಹ ಕ್ರಮವನ್ನು ಕೂಡಲೇ ನಿಲ್ಲಿಸಬೇಕು. ಈ ಬೀಚ್ನ ಹಳೆಯ ಹೆಸರನ್ನು ತೆಂಗಿನಗುಂಡಿ ಬೀಚ್ ಎಂದು ಉಳಿಸಿಕೊಳ್ಳಬೇಕು ಮತ್ತು ಇನ್ನೂ ತೆಗೆಯದ ಹೊಸ ನಾಮಫಲಕಗಳನ್ನು ಆದಷ್ಟು ಬೇಗ ತೆಗೆದುಹಾಕಬೇಕು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸುಲೈಮಾನ್ ಮೂಸಾ ಬಂಗಾಲಿ, ಇಕ್ಬಾಲ್ ಆಹ್ಮದ್ ಬಂಗಾಲಿ ಮತ್ತಿತರರು ಉಪಸ್ಥಿತರಿದ್ದರು.