ಶಿಕ್ಷಕಿ ಸಂಧ್ಯಾ ರಾಯ್ಕರ್ ಏಕಾಏಕಿ ವರ್ಗಾವಣೆ – ಶಾಲೆಗೆ ಬೀಗ ಜಡಿದು ವಿಧ್ಯಾರ್ಥಿಗಳು, ಗ್ರಾಮಸ್ಥರಿಂದ ಪ್ರತಿಭಟನೆ
ಕುಮಟಾ-ಕುಮಟಾ ತಾಲೂಕಿನ ಉಪ್ಪಿನಪಟ್ಟಣ ಶಾಲೆಯಲ್ಲಿ ಬಹಳ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ವಿದ್ಯಾರ್ಥಿಗಳ ಮತ್ತು ಊರವರ ಪ್ರೀತಿಗೆ, ಗೌರವಕ್ಕೆ ಪಾತ್ರಾರಾಗಿದ್ದ ಶಿಕ್ಷಕಿ ಸಂಧ್ಯಾ ರಾಯ್ಕರ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿದ್ದು ವಿಧ್ಯಾರ್ಥಿಗಳಿಗೆ, ಊರವರಿಗೆ ಅತೀವ ಬೇಸರವನ್ನು ಉಂಟುಮಾಡಿದ್ದು ಇರುತ್ತದೆ. ಆದ್ದರಿಂದ ಇಂದು ಶಾಲೆಯಲ್ಲಿ ಸೇರಿದ ಪಾಲಕರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿ ಸಂಧ್ಯಾ ರಾಯ್ಕರ್ ಅವರನ್ನು ಇಲ್ಲಿಯೇ ಇರಿಸಬೇಕು ಆಗದಿದ್ದರೆ ಅವರಷ್ಟೇ ಸಮರ್ಥರನ್ನು ಡೆಪ್ಯೂಟ್ ಮಾಡಬೇಕು ಮತ್ತು ಮುಖ್ಯಾಧ್ಯಾಪಕರ ಸ್ಥಾನ ಖಾಲಿ ಇದ್ದು ಅದನ್ನೂ ಕೂಡ ಭರ್ತಿ ಮಾಡಬೇಕು ಎಂದು ಪ್ರತಿಭಟಿಸಿದರು.
ಸ್ಥಳಕ್ಕೆ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಗಜಾನನ ಪೈಯವರು, ಗ್ರಾಮ ಪಂಚಾಯತ ಉಪಾಧ್ಯಕ್ಷ ಶ್ರೀಧರ ಪೈಯವರು ಆಗಮಿಸಿದ್ದರು. ಗಜಾನನ ಪೈಯವರು ಇಷ್ಟು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ಶಿಕ್ಷಣ ಇಲಾಖೆಯಿಂದ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡದೇ ಇದ್ದದ್ದನ್ನು ಗಮನಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆಯನ್ನು ತಿಳಿಸಿದರು. ಅದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮಸ್ಯೆ ನಿವಾರಣೆಗೆ ತನ್ನಿಂದಾದ ಪ್ರಯತ್ನವನ್ನು ಮಾಡುವುದಾಗಿ ಹೇಳಿದ್ದಾರೆ. ಇಷ್ಟಾದರೂ ಇಲಾಖೆಯಿಂದ ಯಾವೊಬ್ಬ ಅಧಿಕಾರಿಯಾಗಲಿ, CRPಯವರಾಗಲಿ ಸ್ಥಳಕ್ಕೆ ಭೇಟಿ ನೀಡದೇ ಇದ್ದದ್ದು ಪಾಲಕರ, ಊರಿನವರ ಕೆಂಗಣ್ಣಿಗೆ ಗುರಿಯಾಗಿದೆ. ಅತೀ ಶೀಘ್ರವಾಗಿ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ SDMC ಅಧ್ಯಕ್ಷ ಹರಿಶ್ಚಂದ್ರ ಗೌಡ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ SDMC ಸದಸ್ಯರು, ಪಾಲಕರು, ಊರ ನಾಗರಿಕರು, ಪಾಲ್ಗೊಂಡಿದ್ದರು.