ಭಟ್ಕಳ ಹಿಂದೂ ಕಾಲೋನಿಯಲ್ಲಿ ತುರ್ತು ರಸ್ತೆ ದುರಸ್ತಿಗೊಳಿಸುವಂತೆ ಸ್ಥಳಿಯರ ಆಗ್ರಹ
ಭಟ್ಕಳ: ಜಾಲಿ ಪಟ್ಟಣಪಂಚಾಯತ್ ವ್ಯಾಪ್ತಿಯ ಮುಝಮ್ಮಿಲ್ ಮಸೀದಿ ಬಳಿಯ ಹಿಂದೂ ಕಾಲೋನಿಯಲ್ಲಿ ಅಸಮರ್ಪಕ ಯುಜಿಡಿ ಕಾಮಗಾರಿಯಿಂದಾಗಿ ಜನರು ನಿತ್ಯ ಓಡಾಡುವ ತಸ್ತೆ ತೀರ ಹದಗೆಟ್ಟಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ರಸ್ತೆ ದುರಸ್ತಿ ಕಾರ್ಯಕೈಗೊಳ್ಳಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿರುವ ಇಲ್ಲಿನ ನಿವಾಸಿಗಳು ತಮ್ಮ ಪ್ರದೇಶದಲ್ಲಿ ತುರ್ತು ರಸ್ತೆ ದುರಸ್ತಿಗೆ ಕೋರಿ ಜಿಲ್ಲಾಧಿಕಾರಿಯನ್ನು ಮೊರೆ ಹೋಗಿದ್ದಾರೆ. ಹಲವು ಬಾರಿ ಜಾಲಿ ಪಟ್ಟಣ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅವರ ನಿರ್ಲಕ್ಷ್ಯತನದಿಂದಾಗಿ ಮಳೆಗಾಲದಲ್ಲಿ ರಸ್ತೆ ಮತ್ತಷ್ಟು ಹದಗೆಡಲು ಕಾರಣವಾಗಿದೆ ಎಂದು ಮನವಿ ಪತ್ರದಲ್ಲಿ ದೂರಿದ್ದಾರೆ.
ರಸ್ತೆಯ ಹದಗೆಟ್ಟ ಸ್ಥಿತಿಯು ಪಾದಚಾರಿಗಳಿಗೆ ಮತ್ತು ವಾಹನ ಚಾಲಕರಿಗೆ ಗಮನಾರ್ಹ ಸವಾಲುಗಳನ್ನು ಒಡ್ಡಿದೆ, ಇದು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ. ಹಿಂದೂ ಕಾಲೋನಿಯಲ್ಲಿ ಅಂಡರ್‌ಗ್ರೌಂಡ್ ಡ್ರೈನೇಜ್ (ಯುಜಿಡಿ) ಪೈಪ್‌ಗಳ ಅಳವಡಿಕೆಯಿಂದಾಗಿ ರಸ್ತೆ ತೀವ್ರ ಹಾನಿಯಾಗಿದೆ. ಇತ್ತೀಚಿನ ಮಳೆಗಾಲವು ಸಮಸ್ಯೆಯನ್ನು ಸಂಕೀರ್ಣಗೊಳಿಸಿದೆ, ತುಂಬಿದ ಮಣ್ಣು ಕೆಸರಾಗಿ ಮಾರ್ಪಟ್ಟಿದ್ದು, ನಿವಾಸಿಗಳು ರಸ್ತೆಯಲ್ಲಿ ನಡೆದಾಡಲು ಅತ್ಯಂತ ಕಷ್ಟಕರವಾಗಿದೆ.
ಪ್ರತಿನಿತ್ಯ ಅಪಾಯಕಾರಿ ರಸ್ತೆಯಲ್ಲಿ ಸಂಚರಿಸುವ ಶಾಲೆಗೆ ಹೋಗುವ ಮಕ್ಕಳ ಸುರಕ್ಷತೆಯ ಬಗ್ಗೆ ಇಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ರಸ್ತೆಯ ದುಸ್ಥಿತಿಯಿಂದಾಗಿ ಶಾಲೆಗೆ ತೆರಳುವ ಮಕ್ಕಳು ಅನಗತ್ಯ ಅಪಾಯ ಎದುರಿಸುವಂತಾಗಿದೆ.
ರಸ್ತೆಯ ದುರಾವಸ್ಥೆಯಿಂದ ವಾಹನ ಮಾಲೀಕರಿಗೆ ತುಂಬಾ ತೊಂದರೆಯಾಗುತ್ತಿದೆ, ಟೈರ್‌ಗಳು ಆಗಾಗ್ಗೆ ಕೆಸರಿನಲ್ಲಿ ಸಿಲುಕಿಕೊಳ್ಳುತ್ತವೆ, ಇದರಿಂದಾಗಿ ಸಂಚಾರ ಅಸ್ತವ್ಯಸ್ತತೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ. ವಾಹನಗಳನ್ನು ಕೆಸರಿನಿಂದ ಹೊರತೆಗೆಯಲು ಜೆಸಿಬಿಯಂತಹ ಭಾರೀ ಯಂತ್ರಗಳು ಬೇಕು ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಕುರಿತಂತೆ ಸ್ಥಾನೀಯ ನಿವಾಸಿ ಹಾಗೂ ಪತ್ರಕರ್ತ ಇನಾಯತುಲ್ಲಾ ಗವಾಯಿ ಮಾತನಾಡಿ, ‘ಸಾರ್ವಜನಿಕರ ಸುರಕ್ಷತೆ ಮತ್ತು ಅನುಕೂಲಕ್ಕೆ ಇರುವ ರಸ್ತೆಗಳು ಇಂದು ಸಾರ್ವಜನಿಕರಿಗೆ ತೊಂದರೆ ಮತ್ತು ಸಮಸ್ಯೆಯನ್ನು ತಂದೊಡ್ಡುತ್ತಿವೆ, ಸ್ಥಳಿಯ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.