ವಿದ್ಯಾರ್ಥಿಗಳು ತಮ್ಮೊಳಗಿನ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿಕೊಂಡು
ನಿರ್ದಿಷ್ಟ ಗುರಿಯೊಂದಿಗೆ ಸಮಯದ ಮಹತ್ವವನ್ನು ಅರಿತು ಕಾರ್ಯಪ್ರವೃತ್ತರಾದಾಗ ಯಶಸ್ಸು ಸಾಧ್ಯ- ಗಂಗಾಧರ ನಾಯ್ಕ.
ಭಟ್ಕಳ-ವಿದ್ಯಾರ್ಥಿಗಳು ತಮ್ಮೊಳಗಿನ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿಕೊಂಡು
ನಿರ್ದಿಷ್ಟ ಗುರಿಯೊಂದಿಗೆ ಸಮಯದ ಮಹತ್ವವನ್ನು ಅರಿತು ಕಾರ್ಯಪ್ರವೃತ್ತರಾದಾಗ ಯಶಸ್ಸು ಸಾಧ್ಯ ಎಂದು ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಹೇಳಿದರು. ಅವರು ಇಲ್ಲಿನ ಆರ್.ಎನ್.ಎಸ್.ಪ್ರಥಮದರ್ಜೆ ಪದವಿ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ನವ ಮುರ್ಡೇಶ್ವರದ ನಿರ್ಮಾತೃ ಆರ್.ಎನ್. ಶೆಟ್ಟಿಯವರು ಸಾಮಾನ್ಯ ವ್ಯಕ್ತಿಯಾಗಿ ಅಸಾಮಾನ್ಯ ಇಚ್ಛಾಶಕ್ತಿಯ ಫಲವಾಗಿ ಮಹಾನ್ ವ್ಯಕ್ತಿಯಾಗಿ ಆರ್.ಎನ್.ಎಸ್ ಎಂಬ ಹೆಸರೇ ಒಂದು ಬ್ರಾಂಡ್ ಆಗಿ ಪರಿವರ್ತನೆಯಾಯಿತು. ಇಂಥ ಪ್ರೇರಣಾದಾಯಕ ವ್ಯಕ್ತಿಯ ಹೆಸರಿನ ಸಂಸ್ಥೆಯಲ್ಲಿ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಇರಿಸಿಕೊಂಡು ಸಮಯದ ಮಹತ್ವ ಅರಿತು ಗುರಿಸಾಧನೆ ಮಾಡಬೇಕು ಎಂದರು. ವಿದ್ಯಾರ್ಥಿಗಳ ಸಾಧನೆಗೆ ತಂದೆ ತಾಯಿಯ ನಂತರ ಅತ್ಯಂತ ಹೆಚ್ಚನ ಖುಷಿ ಪಡುವವರೆಂದೆ ವಿದ್ಯೆ ಕಲಿಸಿದ ಗುರುಗಳು. ಗುರು ಹಿರಿಯರನ್ನು ಸದಾ ಗೌರವಿಸಬೇಕು ಎಂದು ನುಡಿದರಲ್ಲದೇ ವಿದ್ಯಾರ್ಥಿಗಳ ಭಾವಿ ಬದುಕಿನ ಯಶಸ್ಸಿಗೆ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಹಾಗೂ ಆರ್.ಎನ್ಎಸ್. ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ದಿನೇಶ ಗಾಂವಕರ್ ಮಾತನಾಡಿ ನಮ್ಮ ಸಂಸ್ಥೆ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಅನುಗುಣವಾದ ಶಿಕ್ಷಣವನ್ನು ನೀಡುತ್ತಿದೆ. ವಿದ್ಯಾರ್ಥಿ ಜೀವನದ ಶಿಸ್ತು ಸಂಯಮ ಬದ್ಧತೆಯೇ ಯಶಸ್ವೀ ಜೀವನಕ್ಕೆ ಅಡಿಪಾಯ ಎಂದರಲ್ಲದೇ ಸಂಸ್ಥೆಯಿಂದ ಶಿಕ್ಷಣ ಪಡೆದು ಬೀಳ್ಕೊಡುಗೆ ಪಡೆದ ನಂತರವೂ ಯಾವುದೇ ಸಂದರ್ಭದಲ್ಲಿ ಮಾರ್ಗದರ್ಶನ, ಸಹಕಾರ ಅಗತ್ಯವಿದ್ದಲ್ಲಿ ಅದನ್ನೊದಗಿಸಲು ತಾವು ಸದಾ ಸಿದ್ಧ ಎಂದು ನುಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿದ್ದ ಕಾರ್ಯಕ್ರಮದ ಸಂಯೋಜಕ ಉಪನ್ಯಾಸಕ ಗಣಪತಿ ಕಾಯ್ಕಿಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಸಂಯೋಜಕಿ ಉಪನ್ಯಾಸಕಿ ಉಷಾ ನಾಯ್ಕ, ಬಿ.ಸಿ.ಎ.ವಿಭಾಗೀಯ ಮುಖ್ಯಸ್ಥ ಉಪನ್ಯಾಸಕ ಗಣೇಶ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವಿವಿದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು
ಶಮಸುದ್ದೀನ್ ಹಾಗೂ ಗ್ರೀನ್ ಹೌಸ್ ಗುಂಪಿನ
ಸಂಪ್ರೀತಾ ಪಡೆದುಕೊಂಡರು.
ಈ ಸಂದರ್ಭದಲ್ಲಿ ಅಂತಿಮ ಹಂತದ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ನೀಡಿದ ಗುಣಾತ್ಮಕ ಶಿಕ್ಷಣ, ಪ್ರೋತ್ಸಾಹ ಹಾಗೂ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರ ಸ್ನೇಹಮಯ ವ್ಯಕ್ತಿತ್ವ ಕುರಿತು ಅಭಿಮಾನಪೂರ್ವಕವಾದ ನುಡಿಗಳನ್ನು ಭಾವಪೂರ್ಣವಾಗಿ ಹಂಚಿಕೊಂಡರು. ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಅಂತಿಮ ಹಂತದ ವಿದ್ಯಾರ್ಥಿಗಳ ಸ್ನೇಹಮಯ ವ್ಯಕ್ತಿತ್ವ ಹಾಗೂ ಪ್ರೋತ್ಸಾಹದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು
ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಅಂಕಿತಾ ನಾಯ್ಕ ಪ್ರಾರ್ಥಿಸಿದರೆ ಸುಬ್ರಮಣ್ಯ ನಾಯ್ಕ ಯಕ್ಷಗಾನ ನೃತ್ಯದೊಂದಿಗೆ ಚಾಲನೆ ನೀಡಿದರು. ಸಂಪ್ರಿತಾ ನಾಯ್ಕ ಸ್ವಾಗತಿಸಿದರೆ ಚೇತನ ನಾಯ್ಕ ವಂದಿಸಿದರು. ವಿದ್ಯಾರ್ಥಿನಿ ನಾಗಶ್ರೀ ನಾಯ್ಕ ನಿರೂಪಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಉಡುಗೆ ತೊಡುಗೆಗಳಲ್ಲಿ ಸಂಭ್ರಮದಿಂದ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ವಿಶೇಷ ಕಳೆಯನ್ನು ತಂದುಕೊಟ್ಟಿತ್ತು.