ಭಟ್ಕಳ- ಭಟ್ಕಳ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾಕ್ಟರ್ ಮನೆಯಿಂದ ಕರ್ತವ್ಯಕ್ಕೆ ತೆರಳುತ್ತೇನೆಂದು ಹೇಳಿ ಹೋದವರು ಮೂರು ದಿನಗಳಾದರೂ ಕರ್ತವ್ಯಕ್ಕೂ ಹಾಜರಾಗದೇ, ಮನೆಗೂ ಬಾರದೇ ನಿಗೂಢವಾಗಿ ನಾಪತ್ತೆಯಾಗಿರುವ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಪತ್ತೆಯಾದ ವೈದ್ಯ ಉಮೇಶ್ ಅವರು ಸರಕಾರಿ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಾಪತ್ತೆಯಾದ ವೈದ್ಯ ಅವರನ್ನು ಉಮೇಶ ದೇವೆಂದ್ರಪ್ಪ (34) ಎಂದು ಗುರುತಿಸಲಾಗಿದೆ. ಇವರು ಮೂಲತಃ ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ನಿಟ್ಟೂರಿನವರಾಗಿದ್ದರು. ಸದ್ಯ ಇವರು ಭಟ್ಕಳ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಾಗರ ರಸ್ತೆಯ ಡಿ.ಪಿ ಕಾಲೋನಿಯಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡು ಪತ್ನಿಯೊಂದಿಗೆ ವಾಸ ಮಾಡುತ್ತಿದ್ದರು.
ಅಕ್ಟೋಬರ್ 1೦ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಮನೆಯಿಂದ ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಪತ್ನಿಯಲ್ಲಿ ಹೇಳಿ ಹೋದವರು ಸಂಜೆಯಾದರೂ ಮನೆಗೆ ಬಾರದೇ ಬಾರದೆ ,ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ. ಸತತ ಮೂರು ದಿನವಾದರು ಬಾರದೇ ಇದ್ದ ಹಿನ್ನೆಲೆ ನಾಪತ್ತೆಯಾಗಿದ್ದಾರೆಂದು ಶಂಕಿಸಿ ವೈದ್ಯರ ಪತ್ನಿ ಡಾ. ಪೂಜಾ ಎಚ್.ಟಿ.ಉಮೇಶ ಅವರು ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರನ್ನು ದಾಖಲಿಸಿಕೊಂಡ ಗ್ರಾಮೀಣ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.