ನಮ್ಮೊಳಗಿನ ಅಸುರೀ ಗುಣ ಸಂಹಾರವಾಗಬೇಕೆಂಬುದೇ ನವರಾತ್ರಿಯ ಆಚರಣೆಯ ಅಂತರಾರ್ಥ : ಶ್ರೀಧರ ಶೇಟ್.
ಶಿರಾಲಿ:ನಮ್ಮೊಳಗಿನ ಅಸುರೀ ಗುಣ ಸಂಹಾರವಾಗಬೇಕೆಂಬುದೇ ನವರಾತ್ರಿಯ ಆಚರಣೆಯ ಅಂತರಾರ್ಥ ಎಂದು ಸಾಹಿತಿ ಶ್ರೀಧರ ಶೇಟ್ ಶಿರಾಲಿ ನುಡಿದರು. ಅವರು
ಕನ್ನಡ ಸಾಹಿತ್ಯ ಪರಿಷತ್ತು, ಭಟ್ಕಳ ತಾಲೂಕು ಘಟಕದಿಂದ ಇಲ್ಲಿನ ಸಾಲೆಮನೆಯ ಮಠದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆದ ದಸರಾ ಕಾವ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕನ್ನಡ ನಾಡಿನಲ್ಲಿ ಆಚರಿಸುವ ನಾಡಹಬ್ಬ ಮೈಸೂರು ದಸರಾ ಧಾರ್ಮಿಕ, ಐತಿಹಾಸಿಕ, ಸಾಹಿತ್ಯಿಕ, ಸಾಂಸ್ಕೃತಿಕ ಹಿನ್ನೆಲೆಯಿಂದ ವಿಶ್ವ ಪ್ರಸಿದ್ಧಿಯನ್ನು ಪಡೆದಿದೆ. ಅಂತೆಯೇ ಸಾಲೆಮನೆಯಲ್ಲಿ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ದಸರಾ ಉತ್ಸವವನ್ನು
ಕವಿಗೋಷ್ಠಿ, ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸುವ ಮೂಲಕ ಆಚರಿಸುತ್ತಿರುವುದೂ ಕೂಡ ವಿಶೇಷವೇ ಆಗಿದೆ. ನವರಾತ್ರಿಯು ದುಷ್ಟ ರಾಕ್ಷಸರನ್ನು ಸಂಹಾರಮಾಡಿದ ದೇವಿಯನ್ನು ಆರಾಧಿಸುವ ಪರ್ವಕಾಲ. ಈ ಸಂದರ್ಭವು ನಮ್ಮೊಳಗಿನ ಅಸುರೀ ಗುಣಗಳನ್ನು ನೀಗಿಕೊಂಡು ಸಾತ್ವಿಕ ಗುಣಗಳನ್ನು ಸಂವರ್ಧನೆ ಮಾಡಿಕೊಳ್ಳಬೇಕೆಂಬುದೇ ನವರಾತ್ರಿಯ ಅಂತರಾರ್ಥ ಎಂದು ನುಡಿದು ತಮ್ಮ ಸ್ವರಚಿತ ಕವಿತೆ ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಕಳೆದ ಅನೇಕ ವರ್ಷಗಳಿಂದ ಮಠದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ದಸರಾ ಕಾವ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತದೆ. ಈ ಕವಿಗೋಷ್ಠಿಯಲ್ಲಿ ಎಲ್ಲ ಕವಿಗಳು ವಾಚಿಸಿದ ಕವಿತೆಗಳು ವೈಚಾರಿಕತೆಯನ್ನು, ಸಂಸ್ಕಾರವನ್ನು ಮೂಡಿಸಲು ಪ್ರಚೋದಿಸುವಂಥ ವಿಷಯ ವಸ್ತುವನ್ನು ಒಳಗೊಂಡಿರುವುದು ವಿಶೇಷ. ದೇವಾಲಯಗಳು ನಮ್ಮಲ್ಲಿ ಧಾರ್ಮಿಕತೆಯ ಜೊತೆಗೆ ವೈಚಾರಿಕತೆಯನ್ನು ಬೆಳೆಸುವ ತಾಣವಾಗಬೇಕು. ಈ ದಿಸೆಯಲ್ಲಿ ಮಠದ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು. ಕವಿಗೋಷ್ಠಿಯಲ್ಲಿ ಶಂಕರ ನಾಯ್ಕ ಶಿರಾಲಿ, ಎಂ.ಡಿ.ಪಕ್ಕಿ ಶಿರಾಲಿ, ಶಿಕ್ಷಕ ರಾಘವೇಂದ್ರ ಮಡಿವಾಳ, ನಂದನ ನಾಯ್ಕ ಚಿತ್ರಾಪುರ, ಹೇಮಲತಾ ರಾವ್, ಉದಯ ನಾಯ್ಕ, ಆನಂದ ನಾಯ್ಕ, ಕೃಷ್ಣ ಮೊಗೇರ್ ಅಳ್ವೆಕೋಡಿ, ಶಿಕ್ಷಕ ಶಂಕರ ನಾಯ್ಕ ಮುಂತಾದ ಕವಿಗಳು ವಾಚಿಸಿದ ಕವಿತೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಸಂದರ್ಭದಲ್ಲಿ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅವರನ್ನು ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕ ದೇವಿದಾಸ ನಾಯ್ಕ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ದೇಗುಲದ ಭಕ್ತರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.