ಮಾತೃಭೂಮಿ, ಮಾತೃಭಾಷೆ ಕನ್ನಡವನ್ನು ಎಂದೂ ಮರೆಯಬಾರದು : ಕಿಶನ ಬಲ್ಸೆ
ಭಟ್ಕಳ-ಮಾತೃಭಾಷೆ ಕನ್ನಡವನ್ನು ಎಂದೂ ಮರೆಯಬಾರದು ಎಂದು ಕಸಾಪ ಆಜೀವ ಸದಸ್ಯ, ಸಮಾಜ ಸೇವಕ ಕಿಶನ ಬಲ್ಸೆ ನುಡಿದರು. ಅವರು ಉ.ಕ. ಜಿಲ್ಲಾ ಕಸಾಪ ಹಾಗೂ ಭಟ್ಕಳ ತಾಲೂಕಾ ಕಸಾಪದ ಸಹಯೋಗದಲ್ಲಿ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಕಾರ್ಯಕ್ರಮದ ಅಡಿಯಲ್ಲಿ ಇಲ್ಲಿನ ಬೈಲೂರಿನ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಕನ್ನಡ ನಾಡು ನುಡಿ ಭಾಷಣ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು ಕನ್ನಡಿಗರಾದ ನಾವು ಎಲ್ಲೇ ಇದ್ರೂ ಹೇಗೆ ಇದ್ದರೂ, ಎಷ್ಟೇ ಎತ್ತರಕ್ಕೇರಿದರೂ ನಾಡು ನುಡಿಯ ಅಭಿಮಾನ ಹೊಂದಿರಬೇಕು. ಪ್ರಾಥಮಿಕ ಹಂತದ ಶಿಕ್ಷಣ ಕನ್ನಡ ಮಾಧ್ಯಮದಲ್ಲಿಯೇ ನೀಡಬೇಕು.ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಿ ಮಾತ್ರ ನಾಡು ನುಡಿಯನ್ನು ಉಳಿಸಿಕೊಂಡಂತಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಈ ನಾಡಿನ ಇತಿಹಾಸ ಪರಂಪರೆಯ ಘನತೆಯನ್ನು ಅರಿತು ಈ ನಾಡಿನ ಭವಿಷ್ಯವನ್ನು ಕಟ್ಟಬೇಕಿದೆ. ನಾಡು ನುಡಿಯ ಸ್ಮರಣೆ ಕೇವಲ ನವೆಂಬರ್ ಮಾಸಕ್ಕೇ ಮಾತ್ರ ಮೀಸಲಾಗಿಡದೇ ಪ್ರತಿದಿನವೂ ಆಚರಿಸಿದಾಗ ನಿತ್ಯೋತ್ಸವವಾಗುತ್ತದೆ ಎಂದರು. ಶಾಲಾ ಮುಖ್ಯಾಧ್ಯಾಪಕಿ ಸುಜಾತಾ ಹೊರ್ಟಾ ಮಾತನಾಡಿ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮೀಣ ಪ್ರದೇಶದಲ್ಲಿನ ನಮ್ಮ ಶಾಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿರುವುದು ನಮಗೆ ನಿಜಕ್ಕೂ ಸಂತೋಷ ತಂದಿದೆ. ತಾಲೂಕಿನಾದ್ಯಂತ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ನಾಡು ನುಡಿಯ ಅಭಿಮಾನ ಬೆಳೆಸುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದು ನುಡಿದರು. ಮಾನಾಸುತ ಶಂಭು ಹೆಗಡೆ ಬಹುಮಾನ ವಿತರಿಸಿ ಮಾತನಾಡಿದರು. ಕಸಾಪಕಾರ್ಯಕಾರಿ ಸಮಿತಿ ಸದಸ್ಯ ಎಂ.ಪಿ.ಬಂಢಾರಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಕನ್ನಡ ನಾಡು ನುಡಿ ಸ್ಪರ್ಧೆಯಲ್ಲಿ ರಚನಾ ರಮೇಶ ನಾಯ್ಕ ಪ್ರಥಮ, ಶ್ರೇಯಾ ವಿಷ್ಣು ನಾಯ್ಕ,ದ್ವಿತಿಯ ಹಾಗೂ ರುಚಿತಾ ರಮೇಶ ನಾಯ್ಕ ತೃತೀಯ ಬಹುಮಾನ ಪಡೆದರು. ಬಹುಮಾನ ವಿಜೇತರಿಗೆ ಹಾಗೂ ಭಾಗವಹಿಸಿ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪುಸ್ತಕ ಬಹುಮಾನ ವಿತರಿಸಲಾಯಿತು.
ಶಿಕ್ಷಕ ಮಂಜುನಾಥ ಗೌಡ ನಿರೂಪಿಸಿದರೆ ಶಿಕ್ಷಕಿ ಶ್ರೀಮತಿ ಜಯಾ ನಾಯಕ ವಂದಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರಲ್ಲದೆ ನಿತ್ಯೋತ್ಸವ ಗೀತೆಯನ್ನೂ ಹಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.