ತೆಂಗಿನಗುಂಡಿಯಲ್ಲಿ ಯಶಸ್ವಿಯಾಗಿ ಜರುಗಿದ ಪಚ್ಚಲೆ ಮತ್ತು ಪಂಜರು ಕೃಷಿ ತರಬೇತಿ.
ಭಟ್ಕಳ : ಜಲಾನಯನ ಇಲಾಖೆ, ಮೀನುಗಾರಿಕಾ ಇಲಾಖೆ ಮತ್ತು ಸ್ಕೊಡವೆಸ್ ಸಂಸ್ಥೆಯಿಂದ ರಚಿತವಾದ ಭಟ್ಕಳ ಓಶಿಯನ್ ಮೀನುಗಾರರ ಉತ್ಪಾದಕ ಕಂಪನಿಯಿಂದ ಪಚ್ಚಲೆ ಮತ್ತು ಪಂಜರು ಕೃಷಿ ತರಬೇತಿಯು ಇಲ್ಲಿನ ತೆಂಗಿನಗುಂಡಿಯ ತಿಲಕ ಯುವಕ ಮಂಡಲ ಸಭಾಭವನದಲ್ಲಿ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮವನ್ನು ತೆಂಗಿನಗುಂಡಿ ಮೀನುಗಾರ ಒಕ್ಕೂಟದ ಅಧ್ಯಕ್ಷ ಕೇಶವ ಮೊಗೇರ್ ಉದ್ಘಾಟಿಸಿ ಮೀನುಗಾರರು ವಿವಿಧ ರೀತಿಯ ಮೀನು ಮತ್ತು ಸಾಗರೋತದಪನ್ನಗಳ ಕೃಷಿಯ ತರಬೇತಿಗಳ ಪ್ರಯೋಜನವನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಕೊಡವೆಸ್ ಸಂಸ್ಥೆಯ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ ಮಾತನಾಡಿ ಮೀನುಗಾರರ ಆರ್ಥಿಕ ಸಬಲೀಕರಣದ ಉದ್ದೇಶದಿಂದಲೇ ಸರ್ಕಾರ ಮೀನುಗಾರ ಉತ್ಪಾದಕ ಕಂಪನಿಯನ್ನು ಸ್ಥಾಪಿಸಿ ಅದರ ಮೂಲಕ ಪಚ್ಚಲೆ ಕೃಷಿ, ಪಂಜರು ಕೃಷಿ ಹಾಗೂ ಸಾಗರೋತ್ಪನ್ನಗಳ ಕೃಷಿ ತರಬೇತಿಯನ್ನು ಆಯೋಜಿಸುತ್ತಿದೆ ಅಲ್ಲದೇ ಮೀನಿನ ಮೌಲ್ಯವರ್ಧನೆಯ ಮೂಲಕ ಮೀನುಗಾರರ ಆದಾಯ ಹೆಚ್ಚಿಸಲು ಯೋಜನೆಗಳನ್ನು ಹಮ್ಮಿಕೊಂಡಿದೆ. ತರಬೇತಿಯ ನಂತರ ಕಂಪನಿಯ ಮೂಲಕವೇ ಪಚ್ಚಲೆ ಕೃಷಿಗೆ ಬೇಕಾದ ಮರಿಗಳು ಮತ್ತು ಪಂಜರು ಕೃಷಿಗೆ ಬೇಕಾದ ಮೀನಿನಮರಿಗಳು, ಅವುಗಳಿಗೆ ಆಹಾರ ಹಾಗೆಯೇ ಕೃಷಿಯ ನಂತರ ಬೆಳೆದ ಮೀನುಗಳಿಗೆ, ಪಚ್ಚಲೆಗೆ ಉತ್ತಮ ಬೆಲೆಯನ್ನು ನೀಡಿ ಮಾರುಕಟ್ಟೆಯನ್ನೂ ಭಟ್ಕಳ ಓಶಿಯನ್ ಮೀನುಗಾರರ ಉತ್ಪಾದಕ ಕಂಪನಿಯ ಮೂಲಕ ಪಡೆದುಕೊಳ್ಳಬೇಕು ಎಂದು ನುಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಮಹಿಳಾ ಮೀನುಗಾರ ಸಂಘದ ಅಧ್ಯಕ್ಷೆ ಅಶ್ವಿನಿ ಮೊಗೇರ್, ಭಟ್ಕಳ ಓಶಿಯನ್ ಮೀನುಗಾರ ಉತ್ಪಾದಕ ಕಂಪನಿಯ ನಿರ್ದೇಶಕರಾದ ವೆಂಕಟೇಶ ಮೊಗೇರ್, ರಾಮಾ ಖಾರ್ವಿ, ಚಂದ್ರಾವತಿ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.
ನಂತರದಲ್ಲಿ ಸೀ ವ್ಹೀಲ್ ಮೀನುಗಾರರ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಹರೀಶ ದೇಸಾಯಿ ಪಂಜರು ಕೃಷಿಯ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರಲ್ಲದೇ ಈಗಾಗಲೇ ಪಂಜರು ಕೃಷಿಯಲ್ಲಿ ತೊಡಗಿದ ಮೀನುಗಾರರು ಕೇಳಿದ ಸಮಸ್ಯೆಗಳಿಗೆ ಸಮರ್ಪಕವಾದ ಪರಿಹಾರ ಕ್ರಮಗಳನ್ನು ತಿಳಿಸಿದರು. ಉಡುಪಿ ಕಿನಾರಾ ಮೀನುಗಾರರ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯನಿರ್ವಾಹಕಿ ಗಾಯತ್ರಿ ಖಾರ್ವಿ ಪಚ್ಚಲೆ ಕೃಷಿಯ ಕುರಿತು ಮಾಹಿತಿ ನೀಡಿ ಪಚ್ಚಲೆ ಮರಿಗಳನ್ನು ಕಟ್ಟುವ ಕ್ರಮ ಮತ್ತು ಬೆಳೆಸುವಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ತಿಳಿಸಿದರು.ಇದೇ ಸಂದರ್ಬದಲ್ಲಿ ಭಟ್ಕಳ ಓಶಿಯನ್ ಮೀನುಗಾರ ಉತ್ಪಾದಕರ ಕಂಪನಿಯ ಸದಸ್ಯರಿಗೆ ಷೇರು ಪ್ರಮಾಣ ಪತ್ರವನ್ನು ವಿತರಿಸಲಾಯಿತು ಕಾರ್ಯಕ್ರಮದಲ್ಲಿ ತೆಂಗಿನಗುಂಡಿ ಭಾಗದ ಮೀನುಗಾರರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಭಟ್ಕಳ ಓಶಿಯನ್ ಮೀನುಗಾರರ ಉತ್ಪಾದಕ ಕಂಪನಿಯ ಸಿಈಓ ರಮೇಶ ಖಾರ್ವಿ ಎಲ್ಲರನ್ನು ಸ್ವಾಗತಿಸಿ ನಿರೂಪಿಸಿದರೆ ಡಿಈಓ ಪ್ರತಿಮಾ ಖಾರ್ವಿ ವಂದಿಸಿದರು. ಕುಪ್ಪ ಮೊಗೇರ ಪ್ರಾರ್ಥಿಸಿದರು.