ಮಾವಳ್ಳಿ ರೈತ ಉತ್ಪಾದಕ ಕಂಪನಿಯಿಂದ ಎಲೆಚುಕ್ಕಿ ರೋಗ ನಿಯಂತ್ರಣ ಮಾಹಿತಿ ಕಾರ್ಯಾಗಾರ ಸಂಪನ್ನ.
ಭಟ್ಕಳ : ಜಲಾನಯನ ಇಲಾಖೆ , ಕೃಷಿ ಇಲಾಖೆ ಮತ್ತು ಸ್ಕೊಡವೆಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಮಾವಳ್ಳಿ ರೈತ ಉತ್ಪಾದಕ ಕಂಪನಿಯಿಂದ ಎಲೆಚುಕ್ಕಿ ರೋಗ ನಿಯಂತ್ರಣ ಕಾರ್ಯಾಗಾರವು ಇಲ್ಲಿನ ಕಟಗಾರ ಕೊಪ್ಪದಲ್ಲಿ ಸಂಪನ್ನಗೊಂಡಿತು. ಬೆಂಗಳೂರಿನ ಕೃಷಿ ವಿಜ್ಞಾನಿ ಡಾಕ್ಟರ್ ಮಂಜುನಾಥ್ ಅವರು ಅಡಿಕೆ, ಎಲೆ,ಮೆಣಸಿನಕಾಳು ಮತ್ತು ತೆಂಗು ಬೆಳೆಯನ್ನು ನಿರ್ವಹಿಸುವಲ್ಲಿ ರೈತರಿಗೆ ಎದುಗಾಗುವ ಸವಾಲುಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರಲ್ಲದೇ ಎಲೆ ಚುಕ್ಕಿ ರೋಗ ಸೇರಿದಂತೆ ವಿವಿದ ಬೆಳೆಗಳಿಗೆ ಬರುವ ರೋಗಗಳ ಕುರಿತು ರೈತರು ಅರಿತುಕೊಂಡಿರಲೇಬೇಕಾದ ಮಾಹಿತಿಯ ಕುರಿತು ಸವಿವರವಾದ ಮಾಹಿತಿ ನೀಡಿದರು. ಮಣ್ಣಿನ ಪರೀಕ್ಷೆಯನ್ನು ಸಮರ್ಪಕವಾಗಿ ಮಾಡಿಸಿಕೊಂಡು ಯಾವ ಪೋಷಕಾಂಶವನ್ನು ಎಷ್ಟು ಪ್ರಮಾಣದಲ್ಲಿ ನೀಡಬೇಕೆಂಬುದನ್ನು ರೈತರು ಸಮರ್ಪಕವಾಗಿ ಅರಿತುಕೊಂಡು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ರೈತರೊಂದಿಗೆ ನೇರವಾಗಿ ಅಡಿಕೆ ತೋಟಕ್ಕೆ ತೆರಳಿ ಅಲ್ಲಿ ಅಡಿಕೆ ಮರಕ್ಕೆ ಬರುವ ವಿವಿದ ಸಮಸ್ಯೆಗಳ ಕುರಿತು ಪ್ರಾಯೋಗಿಕವಾಗಿ ರೈತರಿಗೆ ತಿಳಿಸಿದರಲ್ಲದೇ ಗೊಬ್ಬರವನ್ನು ಯಾವ ಪ್ರಮಾಣದಲ್ಲಿ ಗಿಡಗಳಿಗೆ ನೀಡಬೇಕೆಂಬುದನ್ನು ತಿಳಿಸದರು. ಅಲ್ಲದೇ ರೈತರು ತಾವು ಕಂಡ ಸಮಸ್ಯೆಗಳ ಕುರಿತು ಕೇಳಿದ ವಿವಿಧ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿದರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿ ಡಾಕ್ಟರ್ ಮಂಜುನಾಥ್ ಅವರನ್ನು ಮಾವಳ್ಳಿ ರೈತ ಉತ್ಪಾದಕ ಕಂಪನಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾವಳ್ಳಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ವಿಷ್ಣುಮೂರ್ತಿ ಹೆಗಡೆ, ಸ್ಕೊಡವೆಸ್ ಸಂಸ್ಥೆಯ ರೈತ ಉತ್ಪಾದಕ ಕಂಪನಿಯ ಯೋಜನಾ ಅಧಿಕಾರಿ ಪ್ರಶಾಂತ ನಾಯಕ, ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ, ಫೀಲ್ಡ ಆಫೀಸರ್ ಉಮೇಶ ಮರಾಠಿ, ಮಾವಳ್ಳಿ ರೈತ ಉತ್ಪಾದಕ ಕಂಪನಿಯ ಸ್ಥಳೀಯ ಸಂಪನ್ಮೂಲ ವ್ಯಕ್ತಿ ಗಣೇಶ ಭಟ್, ಕೀರ್ತಿ ಹಾಗೂ ಕಂಪನಿಯ ರೈತ ಸದಸ್ಯರುಗಳು ಉಪಸ್ಥಿತರಿದ್ದರು.