ಮುರುಡೇಶ್ವರ ತಲುಪಿದ ಅನಂತಮೂರ್ತಿ ಹೆಗಡೆ ಸ್ವಾಭಿಮಾನಿ ಪಾದಯಾತ್ರೆ:- ದಾರಿಯುದ್ದಕ್ಕೂ ಅಪಾರ ಜನಬೆಂಬಲ*
*ನಾಳೆ ಭಟ್ಕಳದಲ್ಲಿ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಕೆ*
*ಹೊನ್ನಾವರ:-* ಶಿರಸಿ ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಕುಮಟಾದಲ್ಲಿ ಘೋಷಣೆಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂಬರುವ ಬಜೆಟ್ ಅಧಿವೇಶನದಲ್ಲಿ ಹಣ ಬಿಡುಗಡೆ ಹಾಗೂ ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡುವ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಆಗ್ರಹಿಸಿ ಕುಮಟಾದಿಂದ ಭಟ್ಕಳದವರೆಗೆ ನಡೆಯುತ್ತಿರುವ ಪಾದಯಾತ್ರೆ ಇಂದು ಹೊನ್ನಾವರದಿಂದ ಆರಂಭವಾಗಿ ಸಂಜೆ ಮುರುಡೇಶ್ವರ ತಲುಪಿದ್ದು ದಾರಿಯುದ್ದಕ್ಕೂ ಅಪಾರ ಜನ ಬೆಂಬಲ ವ್ಯಕ್ತವಾಗಿದೆ. ನಾಳೆ ಭಟ್ಕಳ ತಲುಪಲಿದ್ದು, ಉಸ್ತುವಾರಿ ಸಚಿವ ಮಾಂಕಾಳ ವೈದ್ಯ ರವರ ಕಛೇರಿಗೆ ತೆರಳಿ ಮನವಿ ಸಲ್ಲಿಸಲಿದ್ದಾರೆ.
ನಿನ್ನೆ ಕುಮಟಾ ಮಹಾಸತಿ ದೇವಾಲಯದಿಂದ ಆರಂಭವಾದ ಪಾದಯಾತ್ರೆಯೂ ಹೊನ್ನಾವರ ತಲುಪಿ ಇಂದು ಬೆಳಿಗ್ಗೆ ಹೊನ್ನಾವರದಿಂದ ಆರಂಭವಾದ ಪಾದಯಾತ್ರೆಗೆ ಸ್ಥಳೀಯ ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೃಷ್ಣ ಜೋಶಿ ಸಂಕೋಳ್ಳಿ, ಹಾಗೂ ಸಂದೀಪ್ ಪೂಜಾರಿ, ಸತ್ಯನಾರಾಯಣ ಶೇಟ್, ಅಶೋಕ ಜಾದೂಗಾರ, ಕಾಸರಕೋಡನ ಲೋಕೇಶ ಪಾಲೇಕರ್, ಗಜಾನನ ಕಾಸರಕೋಡ, ಗೋಪಾಲ ಕಾಸರಕೋಡ, ಪ್ರವೀಣ ಕಾಸರಕೋಡ, ನಾಗರಾಜ ಕಾಸರಕೋಡ, ರಾಜೇಶ ಕಾಸರಕೋಡ ಪಾದಯಾತ್ರೆಯನ್ನು ಕಾಸರಕೋಡನಲ್ಲಿ ಸ್ವಾಗತಿಸಿ ಬೆಂಬಲ ಸೂಚಿಸಿ ಪಾದಯಾತ್ರೆಯಲ್ಲಿ ಭಾಗಿಯಾದರು. ನಂತರ ಹಾಗೆ ಸಾಗಿದ ಪಾದಯಾತ್ರೆಗೆ ಮಾರ್ಗಮಧ್ಯ ಮಧ್ಯಪ್ರದೇಶದ ಉಜ್ಜಯಿನಿಯಿಂದ ಬಂದ ನಾಗಾಸಾಧುಗಳು ಪಾದಯಾತ್ರೆ ರೂವಾರಿ ಅನಂತಮೂರ್ತಿ ಗೆ ರುದ್ರಾಕ್ಷಿಯನ್ನು ನೀಡಿ, ಆಸ್ಪತ್ರೆ ನಿರ್ಮಾಣ ಆಗುವುದು ನಿಶ್ಚಿತ ಎಂದು ಆಶೀರ್ವದಿಸಿ ಘಟನೆ ನಡೆಯಿತು.
ನಂತರ ಮಧ್ಯಾಹ್ನ ಗುಣವಂತೆ ತಲುಪಿದ ಪಾದಯಾತ್ರೆಯನ್ನು ಸ್ಥಳೀಯ ನಾಗರೀಕರಾದ ಮಾಧವ ಪಂಡಿತ್, ಗೋವಿಂದ ಗೌಡ, ಎಂ.ಆರ್.ಹೆಗಡೆ, ರಾಮು ಪಿ. ನಾಯ್ಕ, ಶಿವಾನಂದ ಗೌಡ ಅವರು ಅದ್ದೂರಿ ಸ್ವಾಗತ ಕೋರಿ, ಜಿಲ್ಲೆಯ ಜನರಿಗಾಗಿ ತಾವು ಮಾಡುತ್ತಿರುವ ಪಾದಯಾತ್ರೆ ಪ್ರಶಂಸನೀಯ. ನಿಮ್ಮ ಈ ಪಾದಯಾತ್ರೆಗೆ ನಮ್ಮ ಬೆಂಬಲವಿದೆ ಹಾಗೂ ನಿಮ್ಮ ಉದ್ದೇಶಗಳು ಈಡೇರಲಿ ಎನ್ನುವ ಮಾತುಗಳನ್ನು ವ್ಯಕ್ತಪಡಿಸಿದರು. ನಂತರ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು. ನಂತರ ಮಂಕಿ ಮೂಲಕದ ಮುರುಡೇಶ್ವರ ತಲುಪಿ ಅಲ್ಲಿ ವಾಸ್ತವ್ಯ ಹೂಡಿದ್ದಾರೆ. ಪಾದಯಾತ್ರೆಯಲ್ಲಿ ರಾಜ್ಯ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಕರವೇ ಜನಧ್ವನಿಯ ಜಿಲ್ಲಾಧ್ಯಕ್ಷ ಉಮೇಶ ಹರಿಕಾಂತ, ಸಂತೋಷ ನಾಯ್ಕ ಬ್ಯಾಗದ್ದೆ, ಅಹೀಶ ಹೆಗಡೆ ಸೇರಿದಂತೆ ನೂರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
*ನಾಳೆ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಗೆ ಮನವಿ ಸಲ್ಲಿಕೆ*
ಇಂದು ಮುರುಡೇಶ್ವರ ತಲುಪಿದ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದ ಪಾದಯಾತ್ರೆ ನಾಳೆ ಮಧ್ಯಾಹ್ನ ಭಟ್ಕಳ ತಲುಪಲಿದ್ದು, ನಗರದಾದ್ಯಂತ ಪ್ರತಿಭಟನಾ ಮೆರವಣಿಗೆ ಮಾಡಿ, ನಂತರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಕಛೇರಿಗೆ ತೆರಳಿ ಉಸ್ತುವಾರಿ ಸಚಿವ ಮಂಕಾಳ ವೈದ್ಯರಿಗೆ ಮನವಿ ಸಲ್ಲಿಸಲಿದ್ದಾರೆ.