ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿಗರ ಕೈವಾಡವಿದೆ ಎಂದ ಸಚಿವ ಮಾಂಕಳ ವೈದ್ಯರ ಹೇಳಿಕೆಗೆ ಭಟ್ಕಳ ಬಿಜೆಪಿ ಘಟಕ ಖಂಡನೆ
ಭಟ್ಕಳ : ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿಗರ ಕೈವಾಡವಿದೆ ಎಂಬ ಸಚಿವರ ಬೇಜವಾಬ್ದಾರಿ ಹೇಳಿಕೆ ಅವರ ಗೌರವಕ್ಕೆ ಶೋಭೆ ತರುವುದಿಲ್ಲ ಎಂದು ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಶ್ಮೀ ನಾರಾಯಣ ನಾಯ್ಕ ಹೇಳಿದ್ದಾರೆ.
ಅವರು ಇಲ್ಲಿನ ಮಣ್ಕುಳಿ ಬಿಜೆಪಿ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಸಚಿವ ಮಂಕಾಳ್ ವೈದ್ಯರ ಹೇಳಿಕೆ ವಿರೋಧಿಸಿ ಮಾತನಾಡಿದರು. ಕೆಲವು ತಿಂಗಳುಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಿ ಹಾಗೂ ಭಯೋತ್ಪಾಕರಿಗೆ ಬೆಂಬಲ ನೀಡಿತ್ತಾ ಬಂದಿದೆ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಬಿಜೆಪಿಗರೇ ಮಾಡಿದ್ದಾರೆ ಎನ್ನುವುದಾದರೆ ರಾಜ್ಯದಲ್ಲಿ ಇರುವ ತಮ್ಮದೇ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಸವಾಲೆಸೆದಿದ್ದಾರೆ.
ಬಿಜೆಪಿಗರು ಯಾವತ್ತಿಗೂ ಭಯೋತ್ಪಾದರ ಬೆಂಬಲಕ್ಕೆ ನಿಂತಿಲ್ಲ. ನಾವು ಧರ್ಮದ ರಕ್ಷಣೆ ಹಾಗೂ ದೇಶದ ರಕ್ಷಣೆ ವಿರುದ್ಧ ಯಾರು ನಡೆಯುತ್ತಾರೋ ಅವರ ವಿರುದ್ಧ ಹೋರಾಟ ನಡೆಸುತ್ತೇವೆ. ರಾಜ್ಯ ಸಭಾ ಸದಸ್ಯರ ಬೆಂಬಲಿಗರು ವಿಧಾನಸಭಾ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದರು ಕೂಡ ನಮ್ಮ ಸಚಿವರು ಹಾಗೂ ಕಾಂಗ್ರೆಸ್ ಸರ್ಕಾರ ಅವರು ಘೋಷಣೆ ಕೂಗಿಲ್ಲ ಎಂದು ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆ ಸಮರ್ಥಿಸಿಕೊಳ್ಳುವುದರ ಜೊತೆಯಲ್ಲಿ ರಾಜ್ಯದಲ್ಲಿ ಉಗ್ರಗಾಮಿ ಹಾಗೂ ಕುಕೃತ್ಯ ಮಾಡುವವರಿಗೆ ಕಾಂಗ್ರೆಸ್ ಬೆಂಬಲವಾಗಿ ನಿಂತಂತೆ ಕಾಣುತ್ತದೆ. ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ತಮ್ಮ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಇರಬೇಕು. ಹೇಳಿಕೆ ನೀಡುವ ಭರದಲ್ಲಿ ಒಂದು ಸಮುದಾಯದ ಓಲೈಕೆಯ ರಾಜಕಾರಣ ಮಾಡುತ್ತಿರುವುದು ಕಂಡುಬರುತ್ತದೆ. ಇದನ್ನು ಭಟ್ಕಳ ಬಿಜೆಪಿ ಮಂಡಲ ತೀರ್ವವಾಗಿ ಖಂಡಿಸುತ್ತದೆ ಎಂದರು.
ಲೋಕಸಭೆ ಚುನಾವಣೆಯ ಜಿಲ್ಲಾ ಸಂಚಾಲಕ ಗೋವಿಂದ ನಾಯ್ಕ ಮಾತನಾಡಿ, ಉತ್ತರ ಕನ್ನಡ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯ ರವರು ಹಾಸ್ಯಾಸ್ಪದ ಹೇಳಿಕೆಯನ್ನು ನೀಡಿದ್ದಾರೆ. ಯಾಕೆ ಈ ಹೇಳಿಕೆ ನೀಡುತ್ತಿದ್ದೇನೆ ಎನ್ನುವ ಬಗ್ಗೆ ಯೋಚಿಸಿ ಹೇಳಿಕೆ ನೀಡಬೇಕಾಗಿತ್ತು. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದ ನಂತರ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಬಳಿಕ ತಕ್ಷಣ ಕ್ರಮ ಕೈಗೊಂಡರೆ ಈ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಆಗುತ್ತಿರಲಿಲ್ಲ. ಕಾಂಗ್ರೆಸ್ಸಿನ ಈ ಮೃದು ಧೋರಣೆಯಿಂದಲೇ ರಾಮೇಶ್ವರದಲ್ಲಿ ಬಾಂಬ್ ಸ್ಫೋಟ ಆಗಿದೆ. ಬಳಿಕ ಬಿಜೆಪಿ ಕಾರ್ಯಕರ್ತರು ಬಾಂಬ್ ಸ್ಪೋಟ ಮಾಡಿದ್ದಾರೆ ಎಂಬ ಹೇಳಿಕೆಯನ್ನು ಸಚಿವರು ನೀಡಿದ್ದಾರೆ. ಸಚಿವರಿಗೆ ಭಟ್ಕಳದ ಬಗ್ಗೆ ಅರಿವೇ ಇಲ್ಲವೇ? ಈ ದೇಶದಲ್ಲಿ ಎಲ್ಲೇ ಒಂದು ಕೃತ್ಯ ನಡೆದರೂ ಅದರ ಮೂಲ ಜಾಗವನ್ನು ಹುಡುಕುತ್ತಾ ಬಂದರೆ ಭಟ್ಕಳ ಎನ್ನುವುದು ಜಗಜ್ಜಾಹೀರಾಗುತ್ತದೆ. ಮಂಕಾಳ ವೈದ್ಯರು ಸಚಿವರಾಗಿ ಒಂದು ಕೋಮುವಿನ ಓಲೈಕೆಗಾಗಿ ಇಂಥ ಹೇಳಿಕೆ ನೀಡುವುದು ನೋವಿನ ಸಂಗತಿ. ಚುನಾವಣೆ ಸಂದರ್ಭದಲ್ಲಿ ತೆಗೆದುಕೊಂಡ ಒಂದು ಲಕ್ಷದ ಮೂವತ್ತು ಸಾವಿರ ಮತದಲ್ಲಿ 80000 ಮತವನ್ನು ಹಿಂದುಗಳು ನೀಡಿದ್ದಾರೆ. ಇದನ್ನು ಯೋಚನೆ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ್, ಬಿಜೆಪಿ ಮುಖಂಡರಾದ ಸುಬ್ರಾಯ ದೇವಡಿಗ, ಭಾಸ್ಕರ, ಶ್ರೀನಿವಾಸ್ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.