ಬಿಜೆಪಿಗರಿಗೆ ಹೇಳಿಕೊಳ್ಳಲು ಏನೂ ಇರದ್ದಕ್ಕೆ ಹಿಂದು- ಮುಸ್ಲಿಂ ಎನ್ನುತ್ತಾರೆ: ಡಾ.ಅಂಜಲಿ ವಾಗ್ದಾಳಿ
ಶಿರಸಿ: ೧೦ ವರ್ಷಗಳಿಂದ ಏನೂ ಕೆಲಸ ಮಾಡದ ಕಾರಣ ಬಿಜೆಪಿಗರು ಹಿಂದು- ಮುಸ್ಲಿಂ ಎನ್ನುತ್ತಾರೆ. ರಾಮ, ಶಿವಾಜಿ ಹೆಸರು ಎಳೆದು ತರುತ್ತಿದ್ದಾರೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಕಿಡಿಕಾರಿದರು.
ಗಣೇಶನಗರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಆರು ಬಾರಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರದ್ದು ಶಿರಸಿಗೆ ಕೊಡುಗೆ ಏನು? ಒಂದು ಬಾರಿ ಶಾಸಕಿಯಾಗಿ ಖಾನಾಪುರದಲ್ಲಿ ಮಹಿಳೆಯರಿಗಾಗಿ ಆಸ್ಪತ್ರೆ ಕಟ್ಟಿಸಿದ್ದೇನೆ. ಶಾಲಾ- ಕಾಲೇಜು, ರಸ್ತೆ ನಿರ್ಮಿಸಿದ್ದೇನೆ. ಇಬ್ಬರ ಅಭಿವೃದ್ಧಿ ಬಗ್ಗೆ ಯಾವ ವೇದಿಕೆಗೆ ಕರೆದರೂ ಚರ್ಚೆಗೆ ಸಿದ್ಧ ಎಂದರು.
ಶಾಸಕ ಭೀಮಣ್ಣ ನಾಯ್ಕ, ಪ್ರಧಾನಿಯವರಿಗೆ ಶಿರಸಿಗೆ ನಾನೂ ಸ್ವಾಗತಿಸುತ್ತೇನೆ. ಆದರೆ ೧೦ ವರ್ಷಗಳಲ್ಲಿ ಜಿಲ್ಲೆಗೆ ಅವರು ನೀಡಿದ್ದು ಏನು ಎಂಬುದನ್ನ ಹೇಳಬೇಕು. ತಣ್ಣಗಿದ್ದ ಶಿರಸಿಯಲ್ಲಿ ಪರೇಶ್ ಮೇಸ್ತಾ ಪ್ರಕರಣದ ಸಂದರ್ಭ ಬಿಜೆಪಿ ಅಭ್ಯರ್ಥಿ ಕಾಗೇರಿ ಬೆಂಕಿ ಹಚ್ಚಿ ಹುಡುಗರನ್ನ ಗಲಾಟೆಗೆ ಬಿಟ್ಟು ತಾವು ಓಡಿ ಹೋದರು. ಆರು ಬಾರಿ ಶಾಸಕರಾದರೂ ಅಭಿವೃದ್ಧಿ ಮಾಡದೆ ಈಗ ಹೊಟ್ಟೆಕಿಚ್ಚಿಗೆ ನಮ್ಮ ಅಭ್ಯರ್ಥಿಯನ್ನ ಟೀಕಿಸುತ್ತಿದ್ದಾರೆ. ಅವರಿಗೆ ಅಭಿವೃದ್ಧಿಯ ಮೇಲೆ ಮತ ಕೇಳುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಗ್ಯಾರಂಟಿಗಳಿಂದ ಮಹಿಳೆಯರು ಸಬಲರಾಗಿದ್ದಾರೆ. ಅವರಿಗೆ ಆತ್ಮವಿಶ್ವಾಸ ಹೆಚ್ಚಿದೆ. ಇಡೀ ದೇಶದಲ್ಲಿ ಈ ಗ್ಯಾರಂಟಿ ಯೋಜನೆ ಜಾರಿಗೆ ತಂದ ಮೊದಲ ರಾಜ್ಯವೆಂಬ ಹೆಗ್ಗಳಿಕೆ ಕರ್ನಾಟಕದ್ದು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ್ರು, ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ವೆಂಕಟೇಶ್ ಹೆಗಡೆ ಹೊಸಬಾಳೆ, ಪ್ರಮುಖರಾದ ರಮೇಶ ದುಬಾಶಿ, ಸುಮಾ ಉಗ್ರಾಣಕರ್, ಗೀತಾ ಶೆಟ್ಟಿ, ಸಂಜು ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.