ರಾಯಲ್ ಎನ್ ಫೀಲ್ಡ್ ಡಿವೈಡರ್ ಗೋಡೆಗೆ ಡಿಕ್ಕಿ -ಒಬ್ಬ ಸವಾರ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ
ಹೊನ್ನಾವರ-ಹೊನ್ನಾವರದಿಂದ ಗೋವಾಕ್ಕೆ ತೆರಳುತ್ತಿದ್ದ, ರಾಯಲ್ ಎನ್ ಫೀಲ್ಡ್ ಡಿವೈಡರ್ ಗೋಡೆಗೆ ಡಿಕ್ಕಿ ಪಡಿಸಿಕೊಂಡ, ಪರಿಣಾಮ ಮೋಟಾರಬೈಕ್ ನಲ್ಲಿದ್ದವರು ಸಿಡಿದು ಬಿದ್ದು, ಓರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟ ಘಟನೆ ಅಂಕೋಲಾದ ಅವರ್ಸಾದಲ್ಲಿ ನಡೆದಿದೆ. ಇನ್ನೋರ್ವ ಗಾಯಗೊಂಡಿದ್ದಾನೆ.
ಹೊನ್ನಾವರ ಮೂಲದ ಇಬ್ಬರು, ಮಂಗಲ ಕಾರ್ಯಕ್ಕಾಗಿ ತಮ್ಮ ರಾಯಲ್ ಎನ್ ಫೀಲ್ಡ್ ಮೇಲೆ ಹೊನ್ನಾವರದಿಂದ ಗೋವಾಕ್ಕೆ ತೆರಳುತ್ತಿದ್ದಾಗ, ದಾರಿಮಧ್ಯೆ ರಾಷ್ಟ್ರೀಯ ಹೆದ್ದಾರಿಗೆ ಅಡ್ಡ ಬಂದಿದ್ದ ಎನ್ನಲಾದ ಸೈಕಲ್ ಸವಾರನನ್ನು ತಪ್ಪಿಸಲು ಇಲ್ಲವೇ ಅದಾವುದೋ ಕಾರಣದಿಂದ,ಬೈಕಿನ ಮೇಲೆ ನಿಯಂತ್ರಣ ಕಳೆದುಕೊಂಡು,ಹೆದ್ದಾರಿ ಡಿವೈಡರ್ ತಡೆಗೋಡೆಗೆ ಜೋರಾಗಿ ಡಿಕ್ಕಿ ಪಡಿಸಿಕೊಂಡರು ಎನ್ನಲಾಗಿದೆ. ಈ ವೇಳೆ ಅಪಘಾತ ಗೊಂಡ ರಾಯಲ್ ಎಲ್ ಫಿಲ್ಡ್ ನಿಂದ ಬೈಕ್ ಸವಾರ ಮತ್ತು ಹಿಂಬದಿ ಸವಾರ ಸಿಡಿದು ಬಿದ್ದರು ಎನ್ನಲಾಗಿದೆ.
ತುರ್ತು ಆಂಬುಲೆನ್ಸ್ ವಾಹನದ ಮೂಲಕ ಸ್ಥಳೀಯರ ಸಹಕಾರದಲ್ಲಿ ಅವರೀರ್ವರನ್ನೂ ಆಸ್ಪತ್ರೆಗೆ ಸಾಗಿಸುತ್ತಿರುವ ವೇಳೆ,ಓರ್ವ ಮೃತ ಪಟ್ಟ ಎನ್ನಲಾಗಿದ್ದು, ಇನ್ನೋರ್ವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿ ಪಿ ಐ ಶ್ರೀಕಾಂತ ತೋಟಗಿ,ಸಂಚಾರಿ ವಿಭಾಗದ ಪಿಎಸ್ಐ ಸುನಿಲ್ ಹುಲ್ಲೊಳ್ಳಿ ಮತ್ತು ಸಿಬ್ಬಂದಿಗಳು,ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ.
ಅಪಘಾತದ ಘಟನೆಯ ಕುರಿತಂತೆ ಮತ್ತು ಮೃತ ವ್ಯಕ್ತಿ ಹಾಗೂ ಗಾಯಾಳುವಿನ ಕುರಿತು ಹೆಚ್ಚಿನ ಮತ್ತು ನಿಖರ ಮಾಹಿತಿಗಳು ತಿಳಿದು ಬರಬೇಕಿದೆ. ಅವರ್ಸಾ ಗ್ರಾಮವು ಭೌಗೋಳಿಕವಾಗಿ ಮತ್ತು ಜನಸಂಖ್ಯೆ ದೃಷ್ಟಿಯಿಂದ ದೊಡ್ಡ ಗ್ರಾಮವಾಗಿದ್ದು,ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊoಡೆ ಮೀನು ಮಾರುಕಟ್ಟೆ,ತರಕಾರಿ ಮಾರುಕಟ್ಟೆ,ಮತ್ತಿತರ ರೀತಿಯ ವ್ಯಾಪಾರ ವಹಿವಾಟು ಜೋರಾಗಿದೆಯಲ್ಲದೇ, ಶಾಲಾ ಕಾಲೇಜು , ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು,ಮತ್ತಿತರ ಕಾರಣಗಳಿಂದ,ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದ್ದರೂ,ನಾನಾ ಕಾರಣಗಳಿಂದ ಇಲ್ಲಿ ಈವರೆಗೂ ಹೆದ್ದಾರಿ ಪಕ್ಕದಲ್ಲಿ ಪ್ರತ್ಯೇಕ ಸರ್ವಿಸ್ ರೋಡ್ ನಿರ್ಮಿಸದಿರುವುದರಿಂದಲೇ ಅಪಘಾತಗಳು,ಸಾವು ನೋವುಗಳು ಹೆಚ್ಚುವಂತಾಗಿದೆ.