ಭಟ್ಕಳ ತಾಲೂಕು ನಾಮಧಾರಿ ಸಮಾಜದ ಶಿಕ್ಷಣ ಪ್ರೇಮಿಗಳು ಅಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಮಾಜಕ್ಕೆ ಮಾದರಿ : ಡಿ.ಬಿ.ನಾಯ್ಕ.
ಭಟ್ಕಳ : ಭಟ್ಕಳ ತಾಲುಕು ನಾಮಧಾರಿ ಸಮಾಜದ ಶಿಕ್ಷಣ ಪ್ರೇಮಿಗಳು ಅಯೋಜಿಸಿದ ಸತತ 3ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಇಡೀ ಸಮಾಜಕ್ಕೆ ಮಾದರಿಯಾದುದು ಎಂದು ನಿವೃತ್ತ ಶಿಕ್ಷಕರು, ಸಹಕಾರೀ ಧುರೀಣರೂ ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷರಾದ ಡಿ.ಬಿ.ನಾಯ್ಕ ನುಡಿದರು. ಅವರು ಇಲ್ಲಿನ ಆಸರಕೇರಿಯ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ಸಭಾಭವನದಲ್ಲಿ ಭಟ್ಕಳ ತಾಲೂಕಾ ನಾಮಧಾರಿ ಸಮಾಜದ ಶಿಕ್ಷಣ ಪ್ರೇಮಿಗಳು ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಾಮಧಾರಿ ಸಮಾಜದ ಶಿಕ್ಷಣ ಪ್ರೇಮಿಗಳು ಪ್ರತಿಭಾ ಪುರಸ್ಕಾರ ಜೊತೆಗೆ ಆರ್ಥಿಕವಾಗಿ ಸಬಲರಲ್ಲದ, ದುಡಿಯುವ ಕೈಗಳಿಲ್ಲದ
ಕುಟುಂಬದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವನ್ನೂ ನೀಡುತ್ತಿರುವುದು ಎಲ್ಲರಿಗೂ ಮಾದರಿ. ಸಮಾಜದ ಋಣವನ್ನು ತೀರಿಸುವಂಥ ಜವಾಬ್ದಾರಿ ಎಲ್ಲರ ಮೇಲಿದೆ ಎಂಬ ಹೊಣೆಗಾರಿಕೆನ್ನು ಎಲ್ಲರಲ್ಲಿ ಮೂಡಿಸುವ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ. ಇಂದು ಓದಲು ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ್ಕೆ ಕೊರತೆಯಿಲ್ಲ. ಇಂದು ಪುರಸ್ಕೃತರಾದ ಹಾಗೂ ಸಮಾಜದಿಂದ ನೆರವನ್ನು ಪಡೆದ ವಿದ್ಯಾರ್ಥಿಗಳು ಗುರಿ ಮುಟ್ಟುವ ತನಕ ಶ್ರದ್ಧೆ ಪರಿಶ್ರಮದಿಂದ ವಿದ್ಯಾರ್ಜನೆಯನ್ನು ಗಳಿಸಿಕೊಳ್ಳಬೇಕು. ಮುಂದೆ ತಾವು ನೆಲೆ ನಿಂತ ನಂತರ ಇಂಥ ಸಂಘಟನೆಗಳ ಮೂಲಕ ದುರ್ಬಲರ ನೆರವಿಗೂ ಕೈಜೋಡಿಸುವ ಜವಾಬ್ದಾರಿಯನ್ನೂ ನಿರ್ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಪಂದನ ಸಂಸ್ಥೆಯ ಅಧ್ಯಕ್ಷ ಹಾಗೂತಾಲೂಕಾ ನಾಮಧಾರಿ ಸಮಾಜದ ಶಿಕ್ಷಣ ಪ್ರೇಮಿಗಳ ಸಂಘಟನೆಯ ಸಂಚಾಲಕ ರಾಘವೇಂದ್ರ ನಾಯ್ಕ ಮಾತನಾಡಿ ಶೈಕ್ಷಣಿಕ ನಿಧಿ ಹುಂಡಿ ಯೋಜನೆಯ ಮೂಲಕ ಸಮುದಾಯದ ವಿದ್ಯಾರ್ಥಿಗಳ ನೆರವಾಗುವ ಕಾರ್ಯಕ್ರಮಕ್ಕೆ ಸಮಾಜ ಬಾಂಧವರಿಂದ ತೆರೆದ ಮನಸಿನ ಸಹಕಾರ ದೊರೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಸಾಧನೆಯ ಹಂಬ ಹೊಂದಿದ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಶಿಕ್ಷಣ ಪ್ರೇಮಿಗಳು ಸದಾ ಜೊತೆಯಿರಲಿದ್ದಾರೆ ಎಂದರು.
ಗುರುಮಠದ ಅಧ್ಯಕ್ಷರಾದ ಅರುಣ ನಾಯ್ಕ ಮಾವಳ್ಳಿ ಹೋಬಳಿ ನಾಮಧಾರಿ ಸಮಾಜದ ಅಧ್ಯಕ್ಷರಾದ ಶ್ರೀಯುತ ಆರ್ ಕೆ ನಾಯ್ಕ, ನಿವೃತ್ತ ನ್ಯಾಯಾಧೀಶರಾದ ರವಿ ನಾಯ್ಕ, ಸಾಂದರ್ಭಿಕವಾಗಿ ನಾಮಧಾರಿ ಸಮಾಜದ ಶಿಕ್ಷಣ ಪ್ರೇಮಿಗಳ ಕಾರ್ಯವನ್ನು ಶ್ಲಾಘಿಸಿ ತಾವೂ ಕೂಡ ಈ ಕಾರ್ಯದಲ್ಲಿ ನಿಮ್ಮೊಂದಿಗೆ ಸದಾ ಇದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗುರುಮಠದ ಮಾಜಿ ಉಪಾಧ್ಯಕ್ಷರು ಹಾಗೂ ಶಿಕ್ಷಣ ಪ್ರೇಮಿಗಳು, ಭಟ್ಕಳ ತಾಲೂಕ ನಾಮಧಾರಿ ಸಮಾಜದ ಸದಸ್ಯರಾದ ಭವಾನಿಶಂಕರ ನಾಯ್ಕ ಮಾತನಾಡಿ ಓದಲು ಹಂಬಲಿಸುವ ವಿದ್ಯಾರ್ಥಿಗಳ ಬೆಂಬಲಕ್ಕೆ ಶಿಕ್ಷಣ ಪ್ರೇಮಿಗಳು ಸದಾ ಇರಲಿದ್ದೇವೆ ಎಂದರಲ್ಲದೇ ಸಮಾಜದ ಪ್ರತಿಯೊಂದು ಕುಟುಂಬದವರೂ ಶೈಕ್ಷಣಿಕ ನಿಧಿ ಯೋಜನೆಗೆ ಸಹಕರಿಸಬೇಕೆಂದು ನುಡಿದರು.
ಕಾರ್ಯಕ್ರಾಮದಲ್ಲಿ ಸಹಕಾರಿ ಧುರೀಣರಾದ ಈರಪ್ಪ ಗರ್ಡೀಕರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಗಮನಾರ್ಹ ಸಾಧನೆ ಮಾಡಿದ ಹಾಗೂ ಪಾಲಕರಿಲ್ಲದ ಆರ್ಥಿಕವಾಗಿ ಸಬಲರಲ್ಲದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯರು, ನಿವೃತ್ತ ಶಿಕ್ಷಕರು ಹಾಗೂ ಸಹಕಾರಿ ಧುರೀಣರು ಹಾಗೂ ಭಟ್ಕಳ ನಾಮಧಾರಿ ಸಮಾಜವನ್ನು ಗೌರವಯುತವಾಗಿ ಮುನ್ನಡೆಸಿದ ಡಿ ಬಿ ನಾಯ್ಕರವರನ್ನು, ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಕಳೆದ ಹತ್ತು ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸುತ್ತ ಬಂದಿರುವ ಕೆ ಆರ್ ನಾಯ್ಕರವರನ್ನು, ನಿವೃತ್ತ ಕೃಷಿ ಅಧಿಕಾರಿ ಜಿ.ಎನ್ ನಾಯ್ಕರವರ ಸಮಾಜ ಸೇವಾ ಕಾರ್ಯಕ್ಕಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಡಿ.ಬಿ.ನಾಯ್ಕರವರ ಜೀವನ, ಸಾಧನೆಯ ಹಾದಿಯ ಏಳು ಬೀಳುಗಳ ಕುರಿತು ಗಂಗಾಧರ ನಾಯ್ಕ ಅಭಿನಂದನಾ ನುಡಿಗಳನ್ನಾಡಿದರು.
ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿ ಕುಮಾರಿ ಸಿಂಚನ ಮಂಜುನಾಥ ನಾಯ್ಕ, ಮುರ್ಡೇಶ್ವರ* ಇವಳನ್ನು “ನಾಮಧಾರಿ ಹೆಮ್ಮೆ” ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರದಲ್ಲಿ 90%ಕಿಂತ ಅಧಿಕ ಅಂಕ ಗಳಿಸಿದ 114 ವಿದ್ಯಾರ್ಥಿಗಳಿಗೆ ಪುರಸ್ಕಾರದ ಜೊತೆ ಪ್ರೋತ್ಸಾಹ ಧನ ಮತ್ತು ಪಾಲಕರಿಲ್ಲದ ಆರ್ಥಿಕವಾಗಿ ಸಬಲರಿಲ್ಲದ 18 ವಿದ್ಯಾರ್ಥಿಗಳಿಗೆ ₹10,000/- ನಂತೆ ಸಹಾಯಧನ ವಿತರಿಸಲಾಯಿತು.
ಕಪ್ರಾಸ್ತವಿಕ ನುಡಿಗಳನ್ನಾಡಿದ ಶಿವಾನಂದ ನಾಯ್ಕ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮದ ಧ್ಯೇಯಗಳು, ಉದ್ಧೇಶಗಳು ಹಾಗೂ ನಿಧಿ ಸಂಗ್ರಹಣೆಗೆ ಯೋಜಿಸಿರುವ ಯೋಜನೆಗಳ ಕುರಿತು ಸವಿಸ್ತಾರವಾಗಿ ತಿಳಿಸಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಚಿಕ್ಕ ಚಿಕ್ಕ ಸಹಕಾರವೂ ಕೂಡ ಸಾಗರೋಪಾದಿಯಲ್ಲಿ ಕೆಲಸ ಮಾಡಬಹುದು ಎಂಬುದನ್ನು ಸೂಚ್ಯವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಆಸರಕೇರಿ ಗುರುಮಠ ಆಡಳಿತ ಮಂಡಳಿ ಸದಸ್ಯರು ಹಾಗೂ ಸಾರದಹೊಳೆ ಹಳೆಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಪುರಸ್ಕೃತ ವಿದ್ಯಾರ್ಥಿಗಳು ಹಾಗೂ ಪಾಲಕರು, ನಾಮಧಾರಿ ಸಮಾಜದ ಪ್ರಮುಖರಾದ ಎಂ.ಕೆ.ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಡಿ.ಎಲ್.ನಾಯ್ಕ, ಶಾಂತಾರಾಮ ನಾಯ್ಕ ಜಾಲಿ, ಶಂಕರ ನಾಯ್ಕ, ವೆಂಕಟೇಶ ನಾಯ್ಕ ಅಂಗಡಿಮನೆ ಚಿತ್ರಾಪುರ, ಮನಮೋಹನ ನಾಯ್ಕ, ವೆಂಕಟೇಶ ನಾಯ್ಕ, ಕಮಲಾ ಕೆ.ನಾಯ್ಕ, ಪೂರ್ಣಿಮಾನಾಯ್ಜ, ರಶ್ಮಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಸಂಘಟನೆಯ ಸದಸ್ಯ ದೀಪಕ ನಾಯ್ಕ ಮುರ್ಡೇಶ್ವರರವರು ವಂದಿಸಿದರು. ಮಂಜುನಾಥ ನಾಯ್ಕ ವಂದಿಸಿದರು.ಶಿಕ್ಷಕರಾದ ನಾರಾಯಣ ನಾಯ್ಕ ಹಾಗೂ ಪರಮೇಶ್ವರ ನಾಯ್ಕರವರು ಕಾರ್ಯಕ್ರಮವನ್ನು ನಿರೂಪಿಸಿದರು.