ಭಟ್ಕಳ: ತನ್ನವರನ್ನುಪ್ರೀತಿಸಿ ಪರಧರ್ಮವನ್ನು ಗೌರಸಿ ಮಾದರಿ ಬದುಕು ಬದುಕಿದ ಪ್ರವಾದಿ ಮುಹಮ್ಮದ್ ಪೈಗಂಬರರ ಬದುಕು ಎಲ್ಲರಿಗೂ ಪ್ರೇರಕವಾಗಲಿ ಎಂದು ನ್ಯೂ ಇಂಗ್ಲಿಷ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶಾನಭಾಗ ಹೇಳಿದರು.ಅವರು ಭಟ್ಕಳ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಸೆ.೧೩ ರಿಂದ ೨೨ ರ ವರೆಗೆ ಆಯೋಜಿಸಿದ್ದ ”ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ’ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸುಳ್ಳನ್ನು ಸತ್ಯವೆಂದು ಬಿಂಬಿಸುತ್ತಿರುವ ಇಂದಿನ ಸಾಮಾಜಿ ಮಾಧ್ಯಮಗಳ ಯುಗದಲ್ಲಿ ನಾವೆಲ್ಲರೂ ನಮ್ಮ ನಮ್ಮ ಧರ್ಮವನ್ನು ಪಾಲಿಸುತ್ತ ಇನ್ನೊಬ್ಬರ ಧರ್ಮ ಮತ್ತು ನಂಬಿಕೆಗಳ ಕುರಿತು ಒಳ್ಳೆಯ ಭಾವನೆ ಮೂಡಿಸಿಕೊಂಡು ಬದುಕಲು ಕಲಿಯಬೇಕಾಗಿದೆ. ನಾವೆಲ್ಲರೂ ಪ್ರವಾದಿಗಳ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದರು.
ಗೌರವ ಅಥಿಯಾಗಿದ್ದ ಕರಿಕಲ್ ಚರ್ಚ್ನ ಧರ್ಮಗುರು ಫಾ.ಲೋರೆನ್ಸ್ ಫರ್ನಾಂಡೀಸ್ ಮಾತನಾಡಿ, ಸ್ನೇಹ ಮತ್ತು ಸದ್ಗುಣಗಳಿಂದ ಮನುಷ್ಯನನ್ನು ಗೆಲ್ಲಬಹುದು ವಿನಾಹ ಬಲ ಮತ್ತು ಶಕ್ತಿಯಿಂದ ಅಲ್ಲ ಎನ್ನುವುದು ಪ್ರವಾದಿ ಮುಹಮ್ಮದ್ ಅವರ ಸಂದೇಶವಾಗಿತ್ತು, ನಮ್ಮಲ್ಲಿ ಒಳ್ಳೆಯ ಹೃದಯ ಮತ್ತು ಉತ್ತಮ ಯೋಚನೆಗಳಿದ್ದಾಗ ಮಾತ್ರ ನಮ್ಮ ಸಮಾಜ ಉತ್ತಮವಾಗಿರಲು ಸಾಧ್ಯ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಮುರಡೇಶ್ವರದ ಆರ್.ಎನ್.ಎಸ್ ಪೊಲಿಟೆಕ್ನಿಕ್ ಕಾಲೇಜಿನ ಉಪಪ್ರಾಂಶುಪಾಲ ಕೆ. ಮರಿಸ್ವಾಮಿ ಮಾತನಾಡಿ, ನಮ್ಮಲ್ಲಿನ ಬೇಧಭಾವಗಲು ದೂರವಾಗಬೇಕಾದರೆ ಪ್ರವಾದಿ ಮುಹಮ್ಮದ್ ರನ್ನು ಅನುಸರಿಸುವ ಅವಶ್ಯಕತೆ ಇದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕ ಸಯೀದ್ ಇಸ್ಮಯಿಲ್, ಎಲ್ಲ ರೀತಿಯ ಕೆಡುಕುಗಳು ವಿಜ್ರಂಭಿಸುತ್ತಿದ್ದ ಕಾಲದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರರು ತಮ್ಮ ಸಂದೇಶಗಳ ಮೂಲಕ ಕೆಡುಕು ಮುಕ್ತ ಸಮಾಜವನ್ನು ನಿರ್ಮಿಸಿದರು, ಅವರ ಸಂದೇಶ ಸರ್ವಕಾಲಕ್ಕೂ ಅನ್ವಯಿಸುವಂತಹದ್ದು ಇಂದು ಕೂಡ ಸಮಾಜದಲ್ಲಿ ಆರನೇ ಶತಮಾನದಲ್ಲಿದ್ದ ಎಲ್ಲ ಕೆಡುಕುಗಳು ರಾರಾಜಿಸುತ್ತಿವೆ. ಪ್ರವಾದಿ ಮುಹಮ್ಮದ್ ರ ಸಂದೇಶಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ನಮ್ಮನ್ನು ನಾವು ರಕ್ಷಿಸಿಕೊಳ್ಳೋಣ ಎಂದರು.
ಮಜ್ಲಿಸೆ ಇಸ್ಲಾಹ್ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಸದ್ಭಾವನ ಮಂಚ್ ಗೌರವ ಅಧ್ಯಕ್ಷ ಮೌಲಾನ ಮುನವ್ವರ್ ಪೇಶಮಾಮ್, ಜಮಾಅತೆ ಇಸ್ಲಾಮಿ ಹಿಂದ್ ಉ.ಕ ಜಿಲ್ಲಾ ಸಂಚಾಲಕ ಅಬ್ದುಲ್ ಮನ್ನಾನ್ ಸಿರಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೀರತ್ ಅಭಿಯಾನದ ಸಂಚಾಲಕ ಎಂ.ಆರ್.ಮಾನ್ವಿ ಕಾರ್ಯಕ್ರಮ ನಿರೂಪಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ. ಧನ್ಯವಾದ ಅರ್ಪಿಸಿದರು.