ಭಟ್ಕಳ- ಸದ್ದಿಲ್ಲದೇ ಜಿಲ್ಲೆಯಲ್ಲಿಯೇ ಕನ್ನಡ ಸೇವೆ ಮಾಡುತ್ತಾ ಬಂದಿರುವ ಸಿರಿಗನ್ನಡ ಗೆಳೆಯರ ಬಳಗ ಜೊತೆ ಜೊತೆಯಲ್ಲಿಯೇ ಪ್ರತಿವರ್ಷ ದಸರಾ ಹಬ್ಬವನ್ನೂ ಬಳಗದಿಂದ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದೆ.
ಭರತನಾಟ್ಯ, ಸುಗಮಸಂಗೀತ, ಸಾಹಿತ್ಯ ಗೋಷ್ಠಿ, ಕಮ್ಮಟಗಳು, ರಕ್ತದಾನ ಶಿಬಿರ ಹೀಗೆ ಹತ್ತು ಹಲವಾರು ಜನಪರ ಕಾರ್ಯಗಳನ್ನು ಬಳಗ ನಡೆಸಿಕೊಂಡು ಬರುತ್ತಿದೆ. ಸದಾ ಕ್ರಿಯಾಶೀಲ ಹೊಸತನವನ್ನು ಹುಡುಕುತ್ತಲೇ ವಿನೂತನ ಆಯಾಮದ ಮೂಲಕ ಚಟುವಟಿಕೆ ನಡೆಸುವ ಬಳಗದ ಅಧ್ಯಕ್ಷರು ಹಾಗೂ ಬೈಲೂರು ಗ್ರಾಮ ಪಂಚಾಯತಿಯ ಸದಸ್ಯರಾದ ವಾಸು ನಾಯ್ಕ ಬಲ್ಸೆಯವರು ತನ್ನ ಅನೇಕ ಯುವ ಬಳಗನ್ನು ಕಟ್ಟಿಕೊಂಡು ಕನ್ನಡಕ್ಕಾಗಿ ಸೇವೆ ಮಾಡುವ ದೃಷ್ಟಿಯಿಂದ ಸುಮಾರು ಹದಿನೈದು ವರ್ಷಗಳ ಹಿಂದೆ ಸಿರಿಗನ್ನಡ ಗೆಳೆಯರ ಬಳಗವನ್ನು ಹುಟ್ಟು ಹಾಕಿದರು.ನವರಾತ್ರಿ ಯಂದು ಶಾರದೆಯನ್ನು ಪ್ರತಿಷ್ಠಾಪಿಸಿ ದೇವತಾ ಕಾರ್ಯ ಧಾರ್ಮಿಕ ವಿಧಿ ಅನ್ನಸಂತರ್ಪಣೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಸಂಯೋಜಿಸಿ ಸಮಾಜದಲ್ಲಿ ಅನೇಕ ವಿಧಗಳಲ್ಲಿ ಸೇವೆಗೈದ ಸಾಧನೆ ಮಾಡಿದ ಮಹನೀಯರ ನ್ನು ಸನ್ಮಾನಿಸಿ ಅವರ ಸಾಧನೆಗೆ ಬೆನ್ನು ತಟ್ಟುವ ಮಹಾನ್ ಕಾರ್ಯವನ್ನು ಬಳಗ ನಡೆಸಿ ಕೊಂಡು ಬರುತ್ತಿದೆ
ಅಂತೆಯ ಈ ವರ್ಷ ಶಿರೂರು ದುರಂತದ ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಈಶ್ವರ ಮಲ್ಪೆ,ನಿವರತ್ತ ಯೋದ ನಾಗರಾಜ ದೇವಾಡಿಗ, ಉತ್ತಮ ಶಿಕ್ಷಕ ವಿನಾಯಕ ನಾಯ್ಕ, ಸಮಾಜ ಸೇವಕ ಡಾ ಅಮಿನುದ್ದಿನ್ ಗೌಡ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಜಯಂತ ಮೂಡಲಮನೆ, ವೃದ್ಧರ ಆಶ್ರಯ ದಾತ ನಾಗರಾಜ ನಾಯ್ಕ ಸಿದ್ದಾಪುರ, ಮಾತೃ ಭಕ್ತಿಗೆ ಹೆಸರಾದ ಪ್ರವೀಣ ಮುರುಡೇಶ್ವರ ಮೊದಲಾದ ಸಾಧಕರನ್ನು ಕರೆದು ಸನ್ಮಾನಿಸಿ ಗೌರವಿಸುವ ಕಾರ್ಯ ಮಾಡಿದ್ದು ವಿದ್ವಜ್ಜನರನ್ನು ಹುಬ್ಬೆರಿಸುವಂತೆ ಮಾಡಿದೆ.
ಬೆಳೆಯುವ ಮಕ್ಕಳಿಗಾಗಿ ಅನೇಕ ಆಟೋಟ ಸ್ಪರ್ಧೆಗಳು ಶಿಕ್ಷಣದಲ್ಲಿ ಸಾಧನೆಗೈದ ಮಕ್ಕಳನ್ನು ಪ್ರೊತ್ಸಾಹಿಸುವ ಕಾರಗಯವನ್ನು ಮಾಡುತ್ತಾ ಬರುತ್ತಿದೆ.
ಕೊನೆಯ ದಿನ ಶಾರದೆಯ ಭವ್ಯ ಮೂರ್ತಿಯೊಂದಿಗೆ ನಡೆದ ದಸರಾ ಮೆರವಣಿಗೆ ಜಿಲ್ಲೆಯಲ್ಲಿಯೇ ಹೊಸದೊಂದು ಸಂಚಲನ ಮೂಡಿಸಿದಂತೂ ಸುಳ್ಳಲ್ಲ. ಮೈಸೂರು ದಸರಾ ಮಾದರಿಯಲ್ಲಿ ಸಾಂಸ್ಕೃತಿಕ ಜನಪದ ಲೋಕವನ್ನೇ ಮೆರವಣಿಗೆಯಲ್ಲಿ ತಂದು ನಿಲ್ಲಿಸಿದ ಶ್ರೇಯಸ್ಸು ಸಿರಿಗನ್ನಡ ಗೆಳೆಯರ ಬಳಗದ್ದಾಗಿದೆ. ಗದಗದ ವೀರಗಾಸೆ ಕುಣಿತ, ಡೊಳ್ಳು ಕುಣಿತ, ಸುಮಾರು ಎಪ್ಪತ್ತು ಜನರ ತಂಡದೊಂದಿಗೆ ಬಂದ ದಕ್ಷಿಣ ಕನ್ಬಡ ಗಂಗೊಳ್ಳಿಯ ಕುಣಿತ ಭಜನೆ, ಜಿಲ್ಲೆಯ ಸುಗಮಸಂಗೀತ ಕ್ಷೇತ್ರದ ಪ್ರತಿಭಾನ್ವಿತ ಕಲಾವಿದ ಉಮೇಶ ಮುಂಡಳ್ಳಿ ಅವರ ನಿನಾದ ಸಂಗೀತ ಸಂಚಯದ ಭಕ್ತಿ ಗಾನಾಮೃತ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಅಯೋಜಿಸುವ ಮೂಲಕ ಇಡಿ ಮೆರವಣಿಗೆಯು ಮೈಸೂರು ದಸರಾವನ್ನೇ ಕಣ್ಮುಂದೆ ನೆನಪಿಸುವಂತೆ ಮಾಡಿದವು.
ಬೈಲೂರು ಹವ್ಯಕ ಕಲ್ಯಾಣ ಮಂಟಪದಿಂದ ಸಂಜೆ ಆರೂವರೆ ಸುಮಾರಿಗೆ ಪ್ರಾರಂಭವಾದ ದಸರಾ ಮೆರವಣಿಗೆ ಶ್ರೀ ಕ್ಷೇತ್ರ ಮುರುಡೇಶ್ವರ ದೇವಾಲಯದ ರಾಜಗೋಪುರಕ್ಕೆ ಬರುವಾಗ ಬರೊಬ್ಬರಿ ೧೨ ಗಂಟೆ. ಸುದೀರ್ಘ ಮೆರವಣಿಗೆ ಎಲ್ಲರ ಮೆಚ್ವುಗೆ ಪಡೆಯುತ್ತಾ ಮುರುಡೇಶ್ವರ ಕಡಲಲ್ಲಿ ಶಾರದೆಯ ವಿಸರ್ಜನೆಯೊಂದಿಗೆ ಸಂಪನ್ನವಾಯಿತು.