ಯಲ್ಲಾಪುರ: ಕಳೆದ ಐದಾರು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ಹಿರಿಯ ಪತ್ರಕರ್ತ ಜಗದೀಶ ನಾಯ್ಕ ಯಲ್ಲಾಪುರ ಅವರು ಶನಿವಾರ ರಾತ್ರಿ ಸಾವನಪ್ಪಿದ್ದಾರೆ.ಬಹು ಅಂಗಾ0ಗ ವೈಕಲ್ಯದಿಂದ ಅವರು ಬಳಲುತ್ತಿದ್ದರು. ಶನಿವಾರ ಬೆಳಗ್ಗೆ ಅವರ ಆರೋಗ್ಯ ಹದಗೆಟ್ಟಿತ್ತು. ಕೊನೆ ಕ್ಷಣದವರೆಗೂ ಬದುಕಿಸಿಕೊಳ್ಳುವ ಪ್ರಯತ್ನ ನಡೆಯಿತು. ಶನಿವಾರ ಸಂಜೆ ಹುಬ್ಬಳ್ಳಿ ಆಸ್ಪತ್ರೆಯಿಂದ ಅವರನ್ನು ಯಲ್ಲಾಪುರಕ್ಕೆ ಕರೆ ತರಲಾಗಿದ್ದು, ಈ ವೇಳೆಯಲ್ಲಿಯೇ ಅವರು ಕೊನೆ ಉಸಿರೆಳೆದರು. ಹಿರಿಯ ಪತ್ರಕರ್ತ ಜಗದೀಶ ನಾಯ್ಕ ಅವರ ಅಗಲಿಕೆಗೆ ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕ ಸಂತಾಪ ಸೂಚಿಸಿದೆ.
ಜಗದೀಶ ನಾಯ್ಕ ಅವರು ಮೊದಲು `ಕರಾವಳಿ ಮುಂಜಾವು’ ಪತ್ರಿಕೆಯ ಪ್ರತಿನಿಧಿಯಾಗಿದ್ದರು. `ಕಾರವಾರ ಕಚೇರಿಯಲ್ಲಿ ಪ್ರಜಾವಾಣಿ’ ಪತ್ರಿಕೆಯ ಸಹಾಯಕ ವರದಿಗಾರರಾಗಿಯೂ ಕೆಲಸ ಮಾಡಿದ್ದರು. ನುಡಿಜೇನು, ಕಡಲವಾಣಿ ಸೇರಿ ವಿವಿಧ ಪತ್ರಿಕೆಗಳಿಗೆ ಅವರು ವರದಿ ರವಾನಿಸುತ್ತಿದ್ದರು. `ಯಲ್ಲಾಪುರ ನ್ಯೂಸ್’ ಎಂಬ ವೆಬ್ ಪೋರ್ಟಲ್ ಸ್ಥಾಪಿಸಿ ಅದರ ಮೂಲಕವೂ ಯಲ್ಲಾಪುರ ಭಾಗದ ವರದಿಗಳನ್ನು ಪ್ರಸಾರ ಮಾಡುತ್ತಿದ್ದರು. ಪತ್ರಿಕೋದ್ಯಮಕ್ಕೆ ಬರುವ ಮುನ್ನ ಟಿವಿ ರಿಪೇರಿ ಮಾಡಿ ಬದುಕು ಕಟ್ಟಿಕೊಂಡಿದ್ದರು. 20 ವರ್ಷಕ್ಕೂ ಅಧಿಕ ಕಾಲ ಅವರು ಪತ್ರಿಕೋದ್ಯಮದಲ್ಲಿದ್ದರು. ಭಾನುವಾರ ಬೆಳಗ್ಗೆ ಜಗದೀಶ ನಾಯ್ಕ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.