ಭಟ್ಕಳ-ಭಟ್ಕಳದಲ್ಲಿ ನಡೆದ ಕನ್ನಡರಾಜ್ಯೋತ್ಸವದ ಸಂದರ್ಭದಲ್ಲಿ ಜನಪ್ರತಿನಿದಿಯಾಗಿ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಲು ಹಿಂದೇಟು ಹಾಕಿದ ಜಾಲಿ ಪಟ್ಟಣ ಪಂಚಾಯತಿಯ ಅಧ್ಯಕ್ಷರ ವರ್ತನೆಗೆ ಎಲ್ಲೆಡೆಯಿಂದ ತೀವೃ ವಿರೋಧ ವ್ಯಕ್ತವಾಗುತ್ತಿದೆ. ಸಾರ್ವಜನಿಕ ಸಮಾರಂಭವಾದ ರಾಷ್ಟ್ರೀಯ ದಿನಾಚರಣೆಗಳ ವೇದಿಕೆಯಲ್ಲಿ ಅವರ ಈ ವರ್ತನೆ ಸ್ವೀಕಾರಾರ್ಹವಲ್ಲ. ನಾವೆಲ್ಲರೂ ಭಾರತವನ್ನು ಕರ್ನಾಟಕವನ್ನು ಬರಿಯ ನೆಲವಾಗಿ ಕಾಣುವುದಿಲ್ಲ. ಹೊತ್ತ ತಾಯಿಯಂತೆ ಕಾಣುತ್ತೇವೆ.ಭುವನೇಶ್ವರಿಯ ಅರ್ಚನೆ ನಮ್ಮ ತಾಯಿಯನ್ನು ಪೂಜಿಸಿದಂತೆ. ಕನ್ನಡಮಾತೆಗೆ ಪುಷ್ಪಾರ್ಚನೆ ಮಾಡಿದಲ್ಲಿ ಅದು ಅವರ ಧರ್ಮ ಬಾಹೀರ ಆಚರಣೆಯಾಗುತ್ತದೆ ಎಂದು ಅವರು ಯಾವ ಸಂದರ್ಭದಲ್ಲಿಯೂ ಭಾವಿಸಬಾರದು. ನಾಡದೇವಿಯನ್ನು ಪೂಜಿಸುವುದು ಸಮಾಜ ಒಪ್ಪಿತವಾದ ಸಂಸ್ಕಾರ. ದೇವರು ಸಹ ಮೆಚ್ಚಿಕೊಳ್ಳುವ ಎತ್ತರದ ಮೌಲ್ಯ ಮತ್ತು ಚಿಂತನೆ. ಹೆತ್ತ ತಾಯಿಯನ್ನು, ನಮ್ಮನ್ನು ಹೊತ್ತ ತಾಯಿಯಾದ ಈ ನೆಲವನ್ನು ಪೂಜಿಸಿದರೆ ನಾವೆಲ್ಲರೂ ನಮ್ಮ ನಮ್ಮ ಧರ್ಮಗಳನ್ನೂ ಪಾಲಿಸುವುದರ ಜೊತೆಗೆ ನಾಡಧರ್ಮವನ್ನೂ , ರಾಷ್ಡ್ರಧರ್ಮವನ್ನೂ ಪಾಲಿಸಿದಂತಾಗುತ್ತದೆ. ಈ ದಿಸೆಯಲ್ಲಿ ಪ್ರಾಂಜಲ ಮನಸಿನಿಂದ ಯೋಚಿಸಬೇಕಿದೆ. ತಮ್ಮ ಆಲೋಚನೆ ಮತ್ತು ತಿಳುವಳಿಕೆಯ ಪರಿಧಿಯನ್ನೂ ವಿಸ್ತರಿಸಿಕೊಳ್ಳಬೇಕಿದೆ ಎಂದು ಗಂಗಾಧರ ನಾಯ್ಕ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಭಟ್ಕಳ ತಿಳಿಸಿದ್ದಾರೆ.