ಶಿರಸಿ: ಪ್ರತ್ಯೇಕ ಜಿಲ್ಲೆ ಹೋರಾಟ ಇಲ್ಲಿಯವರೆಗೆ ಒಂದು ಲೆಕ್ಕ, ಇನ್ನು ಮುಂದಿನ ಹೋರಾಟ ಬೇರೆನೇ ಲೆಕ್ಕ. ಸಾಕ್ಷಾತ್ ಶ್ರೀ ಮಾರಿಕಾಂಬೆಯೇ ನಮಗೆ ಶುಭಾಶೀರ್ವಾದ ಮಾಡಿ ಹೋರಾಟಕ್ಕೆ ಆಶೀರ್ವದಿಸಿದ್ದಾಳೆ. ದೈವಬಲದೊಂದಿಗೆ ಜನಬಲ ಕೂಡಿದರೆ ‘ಕದಂಬ ಕನ್ನಡ ಜಿಲ್ಲೆ ಹೋರಾಟ ಯಶಸ್ಸಾಗುವುದರಲ್ಲಿ ಸಂಶಯವಿಲ್ಲ ಎಂದು ಕದಂಬ ಕನ್ನಡ ಜಿಲ್ಲಾ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ನಗರದ ಶ್ರೀ ಮಾರಿಕಾಂಬಾ ದೇವಿ ಸನ್ನಿಧಿಯಲ್ಲಿ ಮಂಗಳವಾರ ಚಂಡಿಕಾ ಯಾಗ ನೆರವೇರಿಸಿ, ದೇವಾಲಯದಿಂದ ಹೊರಟ ಮೆರವಣಿಗೆಯಲ್ಲಿ ಭಾಗಿಯಾಗಿ ಮಾತನಾಡಿದರು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಗಾಗಿ ಘಟ್ಟದ ಮೇಲಿನ ಎಲ್ಲಾ ತಾಲೂಕುಗಳನ್ನು ಒಳಗೊಂಡು ಕದಂಬ ಕನ್ನಡ ಜಿಲ್ಲೆ ಆಗಲೇಬೇಕಿದೆ. ಕದಂಬರು ಆಳಿದ ನೆಲ ಇದು. ತಾಯಿ ಕನ್ನಡಾಂಬೆಯ ಪುಣ್ಯಭೂಮಿಯೂ ಹೌದು. ಹಾಗಾಗಿ ಈ ಪ್ರತ್ಯೇಕ ಜಿಲ್ಲೆಗೆ ಕದಂಬ ಕನ್ನಡ ಜಿಲ್ಲೆ ಎಂದು ಘೋಷಿಸಬೇಕು ಎಂಬುದು ಎಲ್ಲ ತಾಲೂಕಿನ ಜನರ ಆಗ್ರಹವಾಗಿದೆ ಎಂದರು.
ಇಂದಿನ ಮೆರವಣಿಗೆ ಇದು ಕೇವಲ ಹೋರಾಟದ ಮೊದಲ ಹೆಜ್ಜೆ. ಇದು ಆರಂಭವಷ್ಟೇ. ಇಂದಿನಿಂದ ಆರಂಭಗೊಳ್ಳುವ ಈ ಹೋರಾಟ ಪ್ರತಿ ಪಂಚಾಯತ ವ್ಯಾಪ್ತಿ ತಲುಪಿ, ಪ್ರತಿ ಮನೆಯಿಂದ ಕದಂಬ ಕನ್ನಡ ಸೇನಾನಿ ಜಿಲ್ಲಾ ಹೋರಾಟಕ್ಕೆ ಬರುವಂತಾಗುತ್ತದೆ. ಎಲ್ಲರನ್ನೂ ಒಳಗೊಂಡು ಹೋರಾಟವನ್ನು ತೀವ್ರವಾಗಿ, ರಚನಾತ್ಮಕವಾಗಿ ಮಾಡಲಾಗುವುದು. ಪ್ರತಿ ತಾಲೂಕಿನ ಪಂಚಾಯತಿ ಮಟ್ಟದಲ್ಲಿ ಜಿಲ್ಲಾ ಹೋರಾಟದ ಸಮಿತಿಯನ್ನು ಮಾಡಲಾಗುವುದು. ಇಲ್ಲಿ ನಾಯಕತ್ವ ಕೇವಲ ಸಾಂಕೇತಿಕವಷ್ಟೇ, ನಮಗೆ ಜಿಲ್ಲೆಯಾಗುವುದು ಮುಖ್ಯ. ಕದಂಬ ಕನ್ಬಡ ಜಿಲ್ಲೆ ಆಗುವವರೆಗೆ ಹೋರಾಟ ನಡೆಯುತ್ತಲೇ ಇರುತ್ತದೆ ಎಂದು ಅವರು ಹೇಳಿದರು
ನಗರ ಸಭೆ ಮಾಜಿ ಗಣಪತಿ ನಾಯ್ಕ ಮಾತನಾಡಿ ನಮ್ಮ ದೈನಂದಿನ ಕೆಲಸಕ್ಕೆ ಜಿಲ್ಲಾಕೇಂದ್ರ ಕಾರವಾರಕ್ಕೆ ತೆರಳುವುದು ಅನಿವಾರ್ಯ. ಎಲ್ಲರಿಗಿಂತ ಮೊದಲಾಗಿ ಬಡವರಿಗೆ ಪ್ರತ್ಯೇಕ ಜಿಲ್ಲೆಯಾಗುವುದು ಅನಿವಾರ್ಯತೆ ಹಾಗು ಅವಶ್ಯಕತೆ ಇದೆ. ಸಾಮಾನ್ಯ ಜನರು ನಮ್ಮ ಈ ಹೋರಾಟಕ್ಕೆ ಜೊತೆಯಾಗಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಸಿ ಎಫ್ ಈರೇಶ ಮಾತನಾಡಿ, ಹೋರಾಟದ ಕಿಚ್ಚು ಈ ದೇಶದ ಮಣ್ಣಿನ ಗುಣವಾಗಿದೆ. ಸಂವಿಧಾನದಲ್ಲಿನ ಅಧಿಕಾರ ವಿಕೇಂದ್ರಿಕರಣವನ್ನು ನಾವು ಬಲವಾಗಿ ನಂಬಿದ್ದೇವೆ. ಪ್ರತಿ ನಾಗರಿಕರಿಗೆ ಸುಲಭಸಾಧ್ಯವಾಗಿ ಸರಕಾರದ ಎಲ್ಲ ವ್ಯವಸ್ಥೆಗಳು ದೊರಕುಂತಾಗಲು ಪ್ರತ್ಯೇಕ ಜಿಲ್ಲೆ ರಚನೆ ಅನಿವಾರ್ಯವಾಗಿದೆ. ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು. ರಾಜ್ಯ ಸರಕಾರ ಕದಂಬರ ನೆಲದಲ್ಲಿ ಕನ್ನಡದ ಅಭಿಮಾನವನ್ನು ತೋರಬೇಕಿದೆ ಎಂದರು.
ಮಹಿಳಾ ಪ್ರಮುಖರಾದ ಜ್ಯೋತಿ ಭಟ್ಟ ಮಾತನಾಡಿ, ಎಲ್ಲರ ಸಹಕಾರ, ಪ್ರೋತ್ಸಾಹ ಇದ್ದರೆ ಮಾತ್ರ ಜಿಲ್ಲೆಯ ಹೋರಾಟಕ್ಕೆ ಇನ್ನಷ್ಟು ಶಕ್ತಿ ಬರುತ್ತದೆ. ಸಾಮಾನ್ಯ ವರ್ಗದ ಜನರು ಪರ್ತ್ಯೇಕ ಜಿಲ್ಲೆ ಹೋರಾಟಕ್ಕೆ ಕೈಜೋಡಿಸಬೇಕೆಂದು ಕರೆ ಕೊಟ್ಟರು.
ಮಾಜಿ ಜಿಪಂ ಸದಸ್ಯೆ ಶೋಭಾ ನಾಯ್ಕ ಘಟ್ಟದ ಮೇಲಿನ ಎಲ್ಲ ತಾಲೂಕಗಳನ್ನು ಒಳಗೊಂಡು, ಜಿಲ್ಲೆಯ ರಚನೆ ನಡೆಯಬೇಕಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಪ್ರತ್ಯೇಕ ಜಿಲ್ಲೆಯಾಗುವುದು ಅನಿವಾರ್ಯವಾಗಿದೆ ಎಂದರು.
ನಗರ ಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ ಪ್ರತ್ಯೇಕ ಜಿಲ್ಲೆ ರಚನೆ ಆಗಲೇಬೇಕಿದೆ. ಈ ಮೊದಲೇ ಆಗಬೇಕಿತ್ತು. ಇನ್ನಾದರೂ ಈ ಹೋರಾಟಕ್ಕೆ ಬಲ ತುಂಬುವ ಮೂಲಕ ಎಲ್ಲರು ಭಾಗಿಯಾಗಬೇಕು ಎಂದರು.
ಜಾಥಾದಲ್ಲಿ ಕದಂಬ ಕನ್ನಡ ಜಿಲ್ಲಾ ಸಮಿತಿ ಸಂಚಾಲಕ ಎಂ.ಎಂ. ಭಟ್ಟ, ಶೋಭಾ ನಾಯ್ಕ, ವಿ.ಎಂ.ಭಟ್ಟ, ಮಹಾದೇವ ಚಲುವಾದಿ, ಶಿವಾನಂದ ದೇಶಳ್ಳಿ, ಅನಿಲ ನಾಯಕ, ರಮೇಶ ದುಭಾಷಿ, ನಗರಸಭೆ ಉಪಾಧ್ಯಕ್ಷ ರಮಾಕಾಂತ ಭಟ್, ವಕೀಲ ಸದಾನಂದ ಭಟ್ಟ, ರಾಘವೇಂದ್ರ ನಾಯ್ಕ, ಶ್ಯಾಮಸುಂದರ ಭಟ್ಟ, ಅನಿಲ ಕರಿ, ಪ್ರಭಾವತಿ ಗೌಡ, ಕೃಷ್ಣಮೂರ್ತಿ ನಾಯ್ಕ ಸಿದ್ದಾಪುರ, ನಂದಕುಮಾರ ಜೋಗಳೇಕರ್, ಮಹಾಂತೇಶ ಹಾದಿಮನೆ, ನಾಗರಾಜ ನಾಯ್ಕ, ಚಿದಾನಂದ ಹರಿಜನ, ಉದಯಕುಮಾರ ಕಾನಳ್ಳಿ, ಲ.ಅಶ್ವತ್ಥ ಹೆಗಡೆ, ವಿನಾಯಕ ಭಾಗ್ವತ್, ಮಂಜುನಾಥ ಆಚಾರಿ ಮಂಜುಗುಣಿ, ಕುಮಾರ ಪಟಗಾರ್ ಸೇರಿದಂತೆ ನೂರಾರು ಹೋರಾಟಗಾರರು ಭಾಗಿಯಾಗಿದ್ದರು.
ಸೋಮವಾರ ಸಂಜೆಯಿಂದಲೇ ಶ್ರೀ ಮಾರಿಕಾಂಬಾ ಸನ್ನಿಧಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಸಮಿತಿ, ಮಂಗಳವಾರ ಬೆಳಿಗ್ಗೆ ಚಂಡಿಕಾ ಯಾಗದ ಪೂರ್ಣಾಹುತಿಯನ್ನು ನೆರವೇರಿಸಿ, ಶ್ರೀ ಮಾರಿಕಾಂಬಾ ದೇವರಿಗೆ ‘ಕದಂಬ ಕನ್ನಡ ಜಿಲ್ಲೆ’ ಮನವಿ ಪತ್ರವಿಟ್ಟು ಪೂಜೆ ಸಲ್ಲಿಸಿ ಡೋಲು ವಾದ್ಯದ ತಂಡದೊಂದಿಗೆ ಹೊರಟ ಜಾಥಾ ಮೆರವಣಿಗೆಯು ನಗರದ ಬಸ್ಟ್ಯಾಂಡ್ ವೃತ್ತ, ಸಿಪಿ ಬಝಾರ್ ಮಾರ್ಗವಾಗಿ ಸಹಾಯಕ ಆಯುಕ್ತರ ಕಛೇರಿ ತಲುಪಿ, ಮುಖ್ಯಮಂತ್ರಿಗಳಿಗೆ ಸಹಾಯಕ ಆಯುಕ್ತರ ಮೂಲಕ ಮನವಿ ಪತ್ರ ಸಲ್ಲಿಸಿತು.
ಶ್ರೀ ಮಾರಿಕಾಂಬಾ ದೇವಾಲಯದ ಸನ್ನಿಧಾನದಲ್ಲಿ ಚಂಡಿಕಾಯಾಗದ ಶುಭಸಂದರ್ಭದಲ್ಲಿ ಪುರೋಹಿತರು ಕದಂಬ ಕನ್ನಡ ಜಿಲ್ಲೆಯಾಗಬೇಕೆಂದು ಪ್ರಾರ್ಥನೆ ಸಲ್ಲಿಸುವ ಹೊತ್ತಿಗೆ ಶ್ರೀದೇವರ ಕಲಶದ ಮೇಲಿಟ್ಟ ಹೂವಿನ ಮಾಲೆಗಳು ಪ್ರಸಾದದ ರೂಪದಲ್ಲಿ ಕೆಳಬಿದ್ದಿದ್ದು, ನೆರೆದಿದ್ದ ಭಕ್ತರಲ್ಲಿ, ಕಾರ್ಯಕರ್ತರಲ್ಲಿ ಸಂಚಲನದ ಜೊತೆಹೆ ಆನಂದ ಭಾಷ್ಪಕ್ಕೆ ಕಾರಣವಾಯಿತು. ನೇತೃತ್ವ ವಹಿಸಿದ್ದ ಅನಂತಮೂರ್ತಿ ಹೆಗಡೆ ಚಂಡಿಕಾಯಾಗ ನೆರವೇರಿಸಿದ ಪವಿತ್ರ ಮಡಿಬಟ್ಟೆಯಲ್ಲಿಯೇ ಬರಿಗಾಲಿನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು.