ಶಿರಾಲಿ : ಮನೆ ಮನಗಳಲ್ಲಿ ಸಾಹಿತ್ಯದ ಕಂಪನ್ನು ಪಸರಿಸಲು ಮನೆಯಂಗಳದಲ್ಲಿ ಕಾವ್ಯೋತ್ಸವದಂತಹ ಕಾರ್ಯಕ್ರಮ ಪರಿಣಾಮಕಾರಿ ಎಂದು ಸಮಾಜ ಸೇವಕ ಬೇತಾಳ ಮಹಾಲೆ ನುಡಿದರು. ಅವರು ಉ.ಕ. ಜಿಲ್ಲಾ ಕಸಾಪ ಹಾಗೂ ಭಟ್ಕಳ ತಾಲೂಕಾ ಕಸಾಪದಿಂದ ರಾಜ್ಯೋತ್ಸವ ಮಾಸದಲ್ಲಿ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಕಾರ್ಯಕ್ರಮದ ಅಡಿಯಲ್ಲಿ ಶಿಕ್ಷಕಿ ಇಂದುಮತಿ ಪ್ರಹ್ಲಾದ ರಾಯಚೂರು ಅವರ ನಿವಾಸದಲ್ಲಿ ಆಯೋಜಿಸಿದ ಮನೆಯಂಗಳದಲ್ಲಿ ಕಾವ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮನೆಯಂಗಳದಲ್ಲಿ ಕಾವ್ಯೋತ್ಸವ ಎಂಬ ಪರಿಕಲ್ಪನೆಯೇ ವಿಶಿಷ್ಟವಾದುದು. ಇಂತಹ ಕಾರ್ಯಕ್ರಮದ ಮೂಲಕ ಸಾಹಿತ್ಯ ಪರಿಷತ್ತು ಜನಸಾಮಾನ್ಯರನ್ನು ತಲುಪುತ್ತಿರುವುದು ತುಂಬಾ ಸಂತೋಷದ ಸಂಗತಿ. ಇದೇ ರೀತಿ ಶಾಲೆ ಅಂಗಳದಲ್ಲಿಯೂ ಕಾವ್ಯೋತ್ಸವ ಕಾರ್ಯಕ್ರಮ ನಡೆಯಲಿ ಅದಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ನುಡಿದು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದೇ ಅತ್ಯಂತ ಹೆಮ್ಮೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮವನ್ನು ಮನೆ ಮನೆಗಳಲ್ಲಿ, ಶಾಲೆಗಳಲ್ಲಿ ಆಯೋಜಿಸುವ ಮೂಲಕ ಕನ್ನಡ ನುಡಿಸೇವೆಯನ್ನು ಮಾಡುವಲ್ಲಿ ಎಲ್ಲರೂ ಅಭಿಮಾನದಿಂದ ಸಹಕಾರವನ್ನು ನೀಡುತ್ತಿದ್ದಾರೆ. ಅದರಲ್ಲೂ ಶಿಕ್ಷಕ ಸಮುದಾಯ ಸಾಹಿತ್ಯದ ಕಾರ್ಯಕ್ರಮಗಳಲ್ಲಿ, ಬರೆವಣಿಗೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ. ಶಿಕ್ಷಕರು, ಕವಿಮಿತ್ರರು ತಮ್ಮ ಮನೆಯಲ್ಲೂ ಕಾವ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲು ಬಯಸುತ್ತಿರುವುದು ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಶಿಕ್ಷಕ ಎಂ.ಎನ್.ನಾಯ್ಕ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯಕ್ರಮಗಳನ್ನು ಸಂಘಟಿಸಿ ಹೆಚ್ಚು ಹೆಚ್ಚು ಜನರನ್ನು ಅದರಲ್ಲೂ ಶಿಕ್ಷಕ ಸಮುದಾಯವನ್ನು ಸಾಹಿತ್ಯ ಕಾರ್ಯಕ್ರಮದಡೆಗೆ ಸೆಳೆಯುತ್ತಿರುವುದು ಖುಷಿ ಕೊಡುವ ಸಂಗತಿ. ಕನ್ನಡದ ಕೆಲಸಗಳಿಗೆ ನಾವೆಲ್ಲರೂ ಕೈಜೋಡಿಸುವ ಮೂಲಕ ನುಡಿಸೇವೆಯಲ್ಲಿ ತೊಡಗಿಸಿಕೊಳ್ಳೋಣ ಎಂದು ನುಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ವೆಂಕಟೇಶ್ ನಾಯ್ಕ, ಲೆಕ್ಕಪತ್ರ ಪರಿಶೋಧಕ ಯು.ಎ ಲೋಹಾನಿ, ನೌಕರ ಸಂಘದ. ರಾಜ್ಯ ಪರಿಷತ್ ಸದಸ್ಯ ಕುಮಾರ್ ನಾಯ್ಕ, ಪ್ರಹ್ಲಾದ ರಾಯಚೂರು, ಸಾಹಿತಿ ಮಾನಾಸುತ ಶಂಭು ಹೆಗಡೆ, ನಾರಾಯಣ ಯಾಜಿ ಶಿರಾಲಿ ಮಾತನಾಡಿದರು. ಕವಿಗೋಷ್ಟಿಯಲ್ಲಿ ಸುಮಲತಾ ನಾಯ್ಕ, ಜಿ.ಟಿ.ಭಟ್, ಹೇಮಲತಾ ಶೆಟ್ ನೇತ್ರಾವತಿ ಶಾನಭಾಗ, ವಿನೋದ ನಾಯ್ಕ, ಶಂಕರ ನಾಯ್ಕ, ಇಂದುಮತಿ ಬಿ.ಜೆ. ಸ್ವರಚಿತ ಕವಿತೆ ವಾಚಿಸಿದರೆ ಗಣಪತಿ ಶಿರೂರು ವಚನ ಗಾಯನ ಮಾಡಿದರು.
ಕಸಾಪ ಗೌರವ ಕೋಶ್ಯಾಧ್ಯಕ್ಷ ಶ್ರೀಧರ ಶೇಟ್ ಶಿರಾಲಿ ಆಶಯ ನುಡಿಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಣಕಿ ಸವಿತಾ ಶೇಟ್ ಕಾರ್ಯಕ್ರಮ ನಿರೂಪಿಸಿದರೆ ಮಂಜುಳಾ ಶಿರೂರು ಪ್ರಾರ್ಥಿಸಿದರು. ಜಯಶ್ರೀ ಆಚಾರಿ, ಪೂರ್ಣಿಮಾ ಕರ್ಕಿಕರ್, ಗೀತಾ ಬಂಢಾರಿ, ಸುಮನಾ ಕೆರೆಕಟ್ಟೆ, ನಾಡು ನುಡಿಯ ಗೀತೆಯನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ ಎನ್ ನಾಯ್ಕ್ ಕಾರ್ಯದರ್ಶಿ ವೆಂಕಟೇಶ್ ನಾಯಕ್ ಲೆಕ್ಕಪತ್ರ ಪರಿಶೋಧಕ ಯುಎ ಲೋಹಾನಿ ಇವರನ್ನು ಸನ್ಮಾನಿಸಲಾಯಿತು ಹಾಗೆ ಮನೆಗಳದಲ್ಲಿ ಕಾವ್ಯೋತ್ಸವ ಕಾರ್ಯಕ್ರಮದ ಅತಿಥ್ಯವನ್ನು ವಹಿಸಿದ ಇಂದುಮತಿ ಪ್ರಹ್ಲಾದ ರಾಯಚೂರು ದಂಪತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗೀತಾ ಶಿರೂರು, ಪೂರ್ಣಿಮಾ ಕರ್ಕಿಕರ್, ರಾಜೇಶ ನಾಯ್ಕ, ನಾಗರತ್ನಾ ನಾಯ್ಕ, ರೇಖಾ ಪಟಗಾರ, ಗಣೇಶ ಗೌಡ, ಬಿ.ಕೆ.ನಾಯ್ಕ, ಕಮಲಾಭಟ್, ಶ್ರೀಶಾ ಶೇಟ್ ಮುಂತಾದವರು ಉಪಸ್ಥಿತರಿದ್ದರು.