ಕಾರವಾರ: ಇತ್ತೀಚೆಗೆ ಹೊನ್ನಾವರದಲ್ಲಿ ನಡೆದ ಗೋ ಹತ್ಯೆ ಪ್ರಕರಣವನ್ನು ಇಡೀ ಸಮಾಜದ ಪರವಾಗಿ ಖಂಡಿಸುತ್ತೇವೆ ಎಂದು ಭಟ್ಕಳದ ತಜೀಂ ಸಂಘಟನೆ ಅಧ್ಯಕ್ಷ ಇನಾಯಿತ್ ಉಲ್ಲಾ ಶಾಬಂದ್ರಿ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಗೋ ಹತ್ಯೆ ಪ್ರಕರಣದಲ್ಲಿ ಭಟ್ಕಳದ ಹೆಸರು ಬರುತ್ತಿದೆ. ಗೋ ಹತ್ಯೆ ಮಾಡಿದವರನ್ನು ಭಟ್ಕಳದವರು ಒಪ್ಪುವುದಿಲ್ಲ. ಈ ಹಿಂದೆಯೂ ರಿಯಾಜ್ ಭಟ್ಕಳ ಎಂದು ಹೆಸರು ಸೇರಿಸಿ ಭಟ್ಕಳದ ಹೆಸರು ಹಾಳು ಮಾಡಲಾಗಿತ್ತು. ಈಗ ಭಟ್ಕಳದ ಹೆಸರು ಚೆನ್ನಾಗಿದೆ. ಆದರೆ ಗೋ ಹತ್ಯೆ ಮಾಡಿದ ಪ್ರಕರಣದಲ್ಲಿ ಮತ್ತೆ ಭಟ್ಕಳದ ಹೆಸರು ತಂದಿರುವುದು ಬೇಸರ ತಂದಿದೆ ಎಂದರು.
ಹೊನ್ನಾವರ ಗೋ ಹತ್ಯೆ ಪ್ರಕರಣದಲ್ಲಿ ಕೆಲವರು ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಪ್ರಯತ್ನ ಮಾಡಿದರು. ಆದರೆ ಜನರು ಬುದ್ದಿವಂತರಾಗಿದ್ದಾರೆ. ಶಾಸಕ ದಿನಕರ ಶೆಟ್ಟಿ ಅವರು ಸಚಿವರ, ಸಿಎಂ, ಗೃಹ ಸಚಿವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಗೆ ನಮ್ಮ ಖಂಡನೆ ಇದೆ. ಅವರ ಸರ್ಕಾರದ ಅವಧಿಯಲ್ಲಿ ಏನು ಮಾಡಿದ್ದರು ಎಂದು ಹೇಳಲಿ ಎಂದರು.
ಹೊನ್ನಾವರದಲ್ಲಿ ಹತ್ಯೆ ಮಾಡಿದ ಗೋವಿನ ಮಾಂಸವನ್ನು ಭಟ್ಕಳದಲ್ಲಿ ಮಾರಾಟ ಮಾಡಿರುವುದಕ್ಕೆ ಹಾಗೂ ತಿಂದಿರುವುದಕ್ಕೆ ನಮಗೂ ಬೇಸರವಿದೆ. ಕಳ್ಳತನ ಮಾಡಿ ಮಾಂಸ ಕೊಡುತ್ತಾರೆ ಎನ್ನುವ ಕಾರಣಕ್ಕೆ ನಾವು ಒಂದು ತಿಂಗಳು ಇಂತಹ ಮಾಂಸ ಖರೀದಿಯನ್ನೇ ಬಂದ್ ಮಾಡಿದ್ದೆವು , ಕದ್ದ ಗೋ ಮಾಂಸ ನಾವು ತಿನ್ನುದಿಲ್ಲ ಎಂದರು. ದನ ಕಳ್ಳತನ ಮಾಡುವುದನ್ನು ಹಾಗೂ ಅದನ್ನ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ನ್ಯಾಯವಾದಿ ಇಮ್ರಾನ್ ಲಂಕಾ ಮಾತನಾಡಿ ಘಟನೆ ಖಂಡನೀಯವಾಗಿದ್ದು ಇದರ ಹಿಂದೆ ಯಾರೇ ಇದ್ದರೂ ಅವರನ್ನು ಬಂಧಿಸಲೇ ಬೇಕು. ಜಿಲ್ಲೆಯಲ್ಲಿ ಗೋ ಹತ್ಯೆ, ಗೋ ಮಾಂಸ ಸಾಗಾಟ ಮಾಡುವವರು ಒಂದೇ ಸಮಾಜದವರಿಲ್ಲ. ಎಲ್ಲಾ ಸಮಾಜದವರ ಹೆಸರು ಪೊಲೀಸ್ ಪಟ್ಟಿಯಲ್ಲಿದೆ. ಯಾರೇ ಗೋ ಹತ್ಯೆ, ಗೋ ಕಳ್ಳತನ ಮಾಡಿದರೆ ನಾವು ಒಪ್ಪುವುದಿಲ್ಲ. ಒಂದೇ ಸಮಾಜವನ್ನ ತಪ್ಪು ಮಾಡಿದ್ದಾರೆಂದು ಬಿಂಬಿಸಬೇಡಿ ಎಂದರು.
ಭಟ್ಕಳದಲ್ಲಿ ಗೋ ಕಳ್ಳತನ, ಗೋ ಹತ್ಯೆ ಪ್ರಕರಣ ಬಂದಾಗ ನಾವು ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದೇವೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶ ನಮ್ಮದಾಗಿದೆ ಎಂದರು.
ಪರೇಶ್ ಮೇಸ್ತಾ ಪ್ರಕರಣದಲ್ಲಿ ಜಾತಿ ಧರ್ಮ ಇಟ್ಟುಕೊಂಡು ರಾಜಕಾರಣ ಮಾಡಿದ್ದರು. ಈಗ ಅದೇ ರೀತಿ ರಾಜಕೀಯ ಮಾಡಲು ಕೆಲವರು ಪ್ರಯತ್ನ ಮಾಡಿದ್ದರು. ಆದರೆ ಜನರು ಇದಕ್ಕೆ ಸ್ಪಂದಿಸಿಲ್ಲ. ಈ ಪ್ರಕರಣದಲ್ಲಿ ಅನ್ಯ ಕೋಮಿನವರೂ ಇದ್ದು ಅವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು..