ಭಟ್ಕಳ: ಭಟ್ಕಳ ದ ಶಿರಾಲಿಯಲ್ಲಿ ರವಿವಾರ ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ಯುಗಾದಿ ಉತ್ಸವವು ಯುಗಾದಿ ಉತ್ಸವ ಸಮಿತಿ ಶಿರಾಲಿ ನೇತೃತ್ವದ ಲ್ಲಿ ನಡೆಯಿತು.ಸಂಜೆ ಶಿರಾಲಿಯ ಆದಿ ಮಾಸ್ತಿ ದೇವಸ್ಥಾನದಿಂದ ಆರಂಭಗೊಂಡ ಬ್ರಹತ ಯುಗಾದಿ ಉತ್ಸವ ಮೆರವಣಿಗೆ ಶಿರಾಲಿ ಮುಖ್ಯ ರಾಷ್ಟ್ರೀಯ ಹೆದ್ದಾರಿ ಮೂಲಕ ಮಾವಿನ ಕಟ್ಟೆ ಮೂಲಕ ಶಿರಾಲಿ ಜನತಾ ವಿದ್ಯಾಲಯ ಆವರಣದಲ್ಲಿ ಸಭೆ ಸೇರಿತು. ಯುಗಾದಿ ಉತ್ಸವ ಮೆರವಣಿಗೆಯಲ್ಲಿ ವಿವಿಧ ಸ್ಥಬ್ದ ಚಿತ್ರಗಳು , ಮಹಿಳಾ ಭಜನಾ ತಂಡಗಳು, ಚಂಡೆ ವಾದ್ಯ ತಂಡಗಳು, ಭಾಗವಹಿಸಿದವು.
ನಂತರ ಭಟ್ಕಳದ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ನಡೆದ ಮೊದಲನೇ ವರ್ಷದ ಯುಗಾದಿ ಉತ್ಸವದ ಸಭಾ ಕಾರ್ಯಕ್ರಮ ದಲ್ಲಿ ಮುಖ್ಯ ವಕ್ತಾರರಾಗಿ ಭಾಗವಸಿ ಮಾತನಾಡಿದ ಲೇಖಕ, ಅಂಕಣ ಕಾರ ಶ್ರೀ ಪ್ರಕಾಶ ಮಲ್ಪೆ ಅವರು ಹಿಂದುತ್ವದ ಭಾವ ಬುನಾದಿಯಾದ ಯುಗಾದಿ ಹಬ್ಬ ಎಲ್ಲರನ್ನೂ ಒಂದೆಡೆ ಸೇರಿಸುವಹಬ್ಬವಾಗಿದೆ. ಮನುಕುಲದ ಪಾಪ ತೊಳೆಯುವ ಪಾಪವಿನಾಶಿನಿ ಗಂಗಾ ಮಾತೆ ಮತ್ತು ಪ್ರಕೃತಿ ಪ್ರತಿಯೊಬ್ಬರ ಪ್ರಾತಃಸ್ಮರಣೆಯಾಗಿರಬೇಕು.ಮನುಷ್ಯ ಈ ಭೂಮಿ ಮೇಲೆ ಬುದುಕಿದ್ದಾಗ ಪ್ರಕೃತಿಯ ಸಹಾಯ ನಮಗೆ ಅವಶ್ಯ. ಭೂ ತಾಯಿಗೆ ನಮಸ್ಕಾರ ಮಾಡಿ ನೆನಯುವ ಮೂಲಕ ದಿನವನ್ನು ಪ್ರಾರಂಭಿಸಬೇಕು. ಸೂರ್ಯನಮಸ್ಕಾರ, ಭಗವದ್ಗೀತಾ ಪಠಣ, ಸಾಯಂಕಾಲ ಭಜನೆ ಇಂತಹ ಒಳ್ಳೆ ಅಭ್ಯಾಸಗಳಿಂದ ಜೀವನದಲ್ಲಿ ಅತ್ಯುತ್ತಮ ಪರಿವರ್ತನೆ ಹೊಂದಲು ಸಹಾಯಕವಾಗಿದೆ. ದೇವರಲ್ಲಿ ಭಕ್ತಿ ಬೆಳೆಸಿಕೊಂಡಷ್ಟು ಪರಿಪೂರ್ಣವಾಗಲು ಸಾಧ್ಯ ಎಂದರು.ಅರಿಷಡ್ವರ್ಗಗಳಾದಕಾಮ,ಕ್ರೋಧ,ಮೋಹ,ಲೋಭ,ಮದ, ಮಾತ್ಸರ್ಯಗಳನ್ನು ತೊರೆದು, ಉತ್ತಮ ಜೀವನಕ್ಕೆ ಮುಂದಡಿಯಿಡಲು ಯುಗಾದಿಯ ಪರ್ವಕಾಲ ಸಕಾಲವಾಗಿದೆ. ದುಶ್ಚಟ, ದುರ್ಗುಣಗಳನ್ನು ಬಿಟ್ಟು ಮನಃಪರಿವರ್ತನೆ ಮಾಡಿಕೊಂಡು ಹೊಸ ಸಂವತ್ಸರಕ್ಕೆ ಹೊಸ ಜೀವನ ಆರಂಭಿಸಿ ಎಂದರು. ನಮ್ಮ ಮೂಲಬೇರನ್ನು ಮರೆತು ಉಳಿದೆಡೆ ಕೈ ಚಾಚುತ್ತಿದ್ದೇವೆ. ಪಾಶ್ಚಾತ್ಯ ಸಂಸ್ಕೃತಿಯಿಂದ ನಮ್ಮ ಮೂಲ ಶಿಕ್ಷಣ ಪದ್ಧತಿಯೇ ಕಣ್ಮರೆಯಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಪಾಶ್ಚಾತ್ಯರು ನಮ್ಮ ಸಂಸ್ಕೃತಿಯತ್ತ ಮುಖಮಾಡುತ್ತಿದ್ದರೆ, ನಮ್ಮವರು ವಿಮುಖರಾಗುತ್ತಿರುವುದು ವಿಷಾದನೀಯ ಸಂಗತಿ ಎಂದರು. ಧರ್ಮದಿಂದ ಎಲ್ಲವನ್ನೂ ಜಯಿಸಲು ಸಾಧ್ಯ.ಆದ್ದರಿಂದ ಧರ್ಮ ಪ್ರಚಾರ ಕಾರ್ಯದಲ್ಲಿ ಹೆಚ್ಚಾಗಿ ತೊಡಗಬೇಕು. ಸತ್ಕಾರ್ಯಗಳು ಹೆಚ್ಚಾದಂತೆ ಸಮಾಜದಲ್ಲಿನ ವಿಕೃತಿಗಳ ಪ್ರಮಾಣ ಕ್ಷೀಣಿಸುತ್ತದೆ. ಹೆಚ್ಚುತ್ತಿರುವ ಭಯೋತ್ಪಾದನೆ ವಿನಾಶದ ದಾರಿಯನ್ನು ತೋರಿಸುತ್ತದೆ. ಇದರ ಕುರಿತಾಗಿ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದರು.
ಯುಗಾದಿ ಸಮಿತಿಯ ಅಧ್ಯಕ್ಷ ಭಾಸ್ಕರ ದೈಮನೆ ಮಾತನಾಡಿ ಮೊದಲನೇ ವರ್ಷದ ಯುಗಾದಿ ಉತ್ಸವವು ಸಾರ್ವಜನಿಕರ ಸಹಕಾರದಿಂದ ಅತೀ ವಿಜೃಂಭಣೆಯಿಂದ ನಡೆಯುತ್ತಿದೆ ಎಂದು ಹೇಳಿ, ಉತ್ಸವದ ಯಶಸ್ಸಿಗೆ ಕಾರಣೀಭೂತರಾದ ಪ್ರತಿಯೊಬ್ಬರಿಗೂ ಕೃತಜ್ಞತೆಯನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಯುಗಾದಿ ಸಮಿತಿ ಗೌರವಾಧ್ಯಕ್ಷ ಆರ್.ಪಿ.ನಾಯ್ಕ್, ದೇವಿದಾಸ್ ಮಹಾಲೆ, ಉಪಸ್ಥಿತರಿದ್ದರು.ಮೆರವಣಿಗೆ ಯಲ್ಲಿ ಮಾಜಿ ಶಾಸಕ ಸುನೀಲ್. ಬಿ.ನಾಯ್ಕ, ಹಿಂದೂ ಮುಖಂಡರಾದ ಗೋವಿಂದ ನಾಯ್ಕ್, ಕೃಷ್ಣ ನಾಯ್ಕ ಆಸರಕೇರಿ, ದೀಪಕ್ ನಾಯ್ಕ್ , ಶ್ರೀಕಾಂತ್ ನಾಯ್ಕ್, ಮುಕುಂದ ನಾಯ್ಕ್ ಶಾರದಾ ಹೊಳೆ, ಪ್ರಮೋದ ಜೋಶಿ, ಶಿವರಾಮ್ ದೇವಾಡಿಗ,ಬಿಜೆಪಿ ತಾಲೂಕ ಅಧ್ಯಕ್ಷ ಲಕ್ಮಿನಾರಾಯಣ್ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ್, ಬಿಜೆಪಿ ಮುಖಂಡ ಸುಬ್ರಾಯ ದೇವಾಡಿಗ, ಸಾವಿರಾರು ಜನ ಸಾರ್ವಜನಿಕರು ಅತ್ಯುತ್ಸಾಹದಿಂದ ಯುಗಾದಿ ಉತ್ಸವದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.ಭಟ್ಕಳ ಡಿ.ಎಸ್ .ಪಿ ಮಹೇಶ್ ನೇತೃತ್ವದ ಲ್ಲಿ ಪೊಲೀಸ್ ಸಿಬ್ಬಂದಿ ವರ್ಗದವರು ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಿದರು.