ಹೊನ್ನಾವರ-ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ದ ಶರಾವತಿ ನದಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಮಳೆಗಾಲದ ಅವಧಿಯಲ್ಲಿಯೂ ಜಲಚರಗಳ ಜೀವಕ್ಕೆ ತೊಂದರೆಯಾಗುವ ರೀತಿಯಲ್ಲಿ ಮರಳು ತೆಗೆಯಲಾಗುತ್ತಿದೆ.
ಹೊನ್ನಾವರದ ಶರಾವತಿ ನದಿಯಲ್ಲಿ ಅಕ್ರಮ ಮರಳು ತೆಗೆದ ಲಾರಿ ಅದೇ ನದಿಯಲ್ಲಿ ಮುಳುಗಿದೆ ಸತತ ಕಾರ್ಯಾಚರಣೆಯ ನಂತರ ಆ ಲಾರಿಯನ್ನು ಮೇಲೆತ್ತಲಾಗಿದ್ದು, ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶರಾವತಿ ನದಿಯಲ್ಲಿನ ಅಕ್ರಮ ಮರಳುಗಾರಿಕೆ ತಡೆಯುವಂತೆ ಅನೇಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮೀನುಗಾರರು ಸೇರಿ ಸ್ಥಳೀಯರು ಹೋರಾಟವನ್ನು ಮಾಡಿದ್ದಾರೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ, ಮಳೆಗಾಲದ ಅವಧಿಯಲ್ಲಿ ಸಹ ಇಲ್ಲಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ. ಮರಳುಗಾರಿಕೆ ನಡೆಸುವವರು ಹಾಗೂ ಅಧಿಕಾರಿಗಳ ನಡುವೆ ಒಳ ಒಪ್ಪಂದದ ಆರೋಪಗಳು ಇವೆ.
ಒಮ್ಮೆ ಗಣಿ ಇಲಾಖೆ ಅಧಿಕಾರಿಗಳು ಮರಳುಗಾರಿಕೆ ತಡೆಯಲು ತೆರಳಿದಾಗ ಅವರ ಮೇಲೆ ಆಕ್ರಮಣ ನಡೆದಿತ್ತು. ಹೀಗಾಗಿ ಅವರು ಇದೀಗ ಸುಮ್ಮನಿದ್ದಾರೆ. ಆ ಲಾಭಪಡೆದ ಮರಳು ದಂಧೆಕೋರರು ರಾತ್ರಿ-ಹಗಲೆನ್ನದೇ ಅಕ್ರಮ ನಡೆಸುತ್ತಿದ್ದಾರೆ. ಗುರುವಾರ ಸಂಜೆ ಕಾಸರಗೋಡು ಬಳಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಶರಾವತಿ ನದಿಗೆ ಬಿದ್ದಿದೆ. ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿರುವ ಹಿನ್ನಲೆ ಟಿಪ್ಪರ್ ಚಾಲಕ ದಾರಿ ತಪ್ಪಿದ್ದಾರೆ. ನದಿ ಅಂಚಿನ ಪ್ರದೇಶ ತೇವವಾಗಿದ್ದು, ಲಾರಿಯನ್ನು ತನ್ನೊಳಗೆ ಎಳೆದಿದೆ.
ಮರಳುಸಹಿತ ನದಿಗೆ ಬಿದ್ದ ಟಿಪ್ಪರನ್ನು ಕ್ರೇನ್ ಬಳಸಿ ಮೇಲೆತ್ತಲಾಗಿದೆ. ಇದರ ವಿಡಿಯೋ ವೈರಲ್ ಆಗಿದೆ.