ಹೊನ್ನಾವರ-ಹೊನ್ನಾವರದಲ್ಲಿ ಅಕ್ರಮ ಮರಳು ಸಾಗಾಟದ ಟಿಪ್ಪರ್ ನದಿಗೆ ಬಿದ್ದ ವಿಡಿಯೋ ವೈರಲ್ ಆದ ಬಳಿಕ ಮುಜುಗರಕ್ಕೆ ಸಿಲುಕಿದ ಪೊಲೀಸರು ಆ ವಾಹನದ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ವಾಹನದ ಚಾಲಕನನ್ನು ಆರೋಪಿ ಸ್ಥಾನದಲ್ಲಿರಿಸಿದ್ದು, ಚಾಲಕ ಹಾಗೂ ಮಾಲಕನ ಹೆಸರನ್ನು ಸಹ ನಮೂದಿಸಿಲ್ಲ!
ಹೊನ್ನಾವರದ ಶರಾವತಿ ನದಿಯಲ್ಲಿ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅನೇಕ ಪ್ರಭಾವಿಗಳು ಈ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಈ ಜಿಲ್ಲೆಯಲ್ಲಿ ಅಕ್ರಮ ನಡೆಸುವವರನ್ನು ಪ್ರಶ್ನಿಸುವವರಿಲ್ಲ. ಮರಳುಗಾರಿಕೆಗೆ ಅನುಮತಿ ಸಿಗದ ಕಾರಣ ಸರ್ಕಾರದ ಆದಾಯಕ್ಕೂ ಹೊಡೆತ ಬಿದ್ದಿದೆ.
ಈಚೆಗೆ ಹೊನ್ನಾವರದ ಕಳಸಿನಮೂಟೆ ಬಳಿ ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್ ನದಿಗೆ ಬಿದ್ದಿತ್ತು. ಕ್ರೇನ್ ಮೂಲಕ ಆ ಟಿಪ್ಪರನ್ನು ಮೇಲೆತ್ತಿದ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ಇಲ್ಲ ಎಂದಾದರೆ ಆ ಪ್ರಕರಣವೇ ಮುಚ್ಚು ಹೋಗುತ್ತಿತ್ತು. ವೈರಲ್ ಆದ ವಿಡಿಯೋದ ಬಗ್ಗೆ ಪತ್ರಕರ್ತರು ಜಿಲ್ಲಾಧಿಕಾರಿಗಳನ್ನು ಪ್ರಶ್ನೆ ಮಾಡಿದ್ದರು. ಜಿಲ್ಲಾಧಿಕಾರಿಗಳು ಕಠಿಣ ಕ್ರಮದ ಭರವಸೆ ನೀಡಿದ್ದರು. ಇದು ಪೊಲೀಸರಿಗೆ ಸಹ ತಲೆನೋವು ತಂದಿದ್ದು, ವಿಡಿಯೋ ಆಧಾರದಲ್ಲಿಯೇ ಇದೀಗ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳಸಿನಮೂಟೆ ಭಾಗದ ಬೀಟ್ ಪೊಲೀಸ್ ರವಿ ನಾಯ್ಕ ಅವರು `ವಿಡಿಯೋ ನೋಡಿದ ನಾನು ಆ ಊರಿಗೆ ಹೋಗಿ ವಿಚಾರಿಸಿದೆ. ಮೇ 22ರಂದು ಕಳಸಿನಮೂಟೆ ಶರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ವೇಳೆ ನದಿ ದಡ ಕುಸಿತು ಲಾರಿ ನೀರಿಗೆ ಬಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಕ್ರೇನ್ ಮೂಲಕ ಟಿಪ್ಪರ್ ಮೇಲೆತ್ತಿ ಒಯ್ಯಲಾಗಿದೆ. ಸರ್ಕಾರಿ ಸ್ವತ್ತಾದ ಮರಳು ಕದಿಯುವ ಪ್ರಯತ್ನ ನಡೆದಿರುವುದು ಸತ್ಯ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಈ ಹಿನ್ನಲೆ ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆ ಲಾರಿಯ ಹುಡುಕಾಟ ನಡೆಸಿದ್ದಾರೆ.
ಗಣಿ ಇಲಾಖೆಯಿಂದಲೂ ದಾಳಿ!
ಹೊಸಾಡು ಹಾಗೂ ಬಳಕೂರಿನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ವಾಹನಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸೋಮವಾರ ರಾತ್ರಿ ಈ ದಾಳಿ ನಡೆದಿದ್ದು, ಎರಡು ವಾಹನವನ್ನು ವಶಕ್ಕೆಪಡೆದಿದ್ದಾರೆ. ಹಿರಿಯ ಭೂ ವಿಜ್ಞಾನಿ ಆಶಾ ಅವರು ಈ ದಾಳಿಯ ಮುಂದಾಳತ್ವವಹಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.