ಯಲ್ಲಾಪುರ-ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿದೆ. ಶಿವರಾಮ ಹೆಬ್ಬಾರ್ ಅವರು ಬಿಜೆಪಿ ಪಕ್ಷದಿಂದ ಆಯ್ಕೆ ಆಗಿದ್ದರೂ ಈ ಉಚ್ಚಾಟನೆಯಿಂದ ಅವರ ಶಾಸಕ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ!
ಶಿವರಾಮ ಹೆಬ್ಬಾರ್ ಅವರು ಈಗಾಗಲೇ ಬಿಜೆಪಿಯಿಂದ ದೂರ ಸರಿದಿದ್ದರು. ತಮ್ಮ ಮಗ ವಿವೇಕ ಹೆಬ್ಬಾರ್ ಅವರನ್ನು ಕಾಂಗ್ರೆಸ್ಸಿಗೆ ಕಳುಹಿಸಿ ಉನ್ನತ ಹುದ್ದೆಯನ್ನು ಕೊಡಿಸಿದ್ದರು. ಜೊತೆಗೆ ಸ್ಥಳೀಯ ಬಿಜೆಪಿ ನಾಯಕರಿಂದಲೂ ಶಿವರಾಮ ಹೆಬ್ಬಾರ್ ಅಂತರ ಕಾಯ್ದುಕೊಂಡಿದ್ದರು. ಬಿಜೆಪಿ ಸಂಘಟನೆಯಲ್ಲಿ ಸಹ ಶಿವರಾಮ ಹೆಬ್ಬಾರ್ ಸಕ್ರಿಯವಾಗಿರಲಿಲ್ಲ. ಪಕ್ಷದ ಯಾವ ಕಾರ್ಯಕ್ರಮದಲ್ಲಿಯೂ ಅವರು ಭಾಗವಹಿಸುತ್ತಿರಲಿಲ್ಲ. ಈ ಎಲ್ಲಾ ಹಿನ್ನಲೆ ಶಿವರಾಮ ಹೆಬ್ಬಾರ್ ವಿರುದ್ಧ ಬಿಜೆಪಿ ಶಿಸ್ತಿನ ಕ್ರಮ ಜರುಗಿಸಿದೆ.
ಶಿವರಾಮ ಹೆಬ್ಬಾರ್ ಅವರು ಬಿಜೆಪಿ ಚಿಹ್ನೆಯ ಅಡಿ ಶಾಸಕರಾಗಿ ಆಯ್ಕೆಯಾಗಿದ್ದರೂ ಪಕ್ಷದಿಂದ ಉಚ್ಚಾಟನೆ ಆದ ಮಾತ್ರಕ್ಕೆ ಅವರ ಅಧಿಕಾರಕ್ಕೆ ಯಾವುದೇ ತೊಂದರೆ ಇಲ್ಲ. ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಜೊತೆ ಕೂರುವ ಅವಕಾಶದಿಂದ ಮಾತ್ರ ಅವರು ವಂಚಿತರಾಗಲಿದ್ದಾರೆ. ವಿಧಾನಸಭೆಯಲ್ಲಿ ಶಿವರಾಮ ಹೆಬ್ಬಾರ್ ಅವರಿಗೆ ಪ್ರತ್ಯೇಕ ಖುರ್ಚಿ ಕೊಡಲಿದ್ದು, ಪಕ್ಷೇತರ ಶಾಸಕರ ರೀತಿ ಅವರು ಕೆಲಸ ನಿರ್ವಹಿಸಲಿದ್ದಾರೆ.
`ಮುಂದಿನ ಆರು ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆ ಮಾಡಿದ ಬಗ್ಗೆ ವಾಟ್ಸಪ್ ಸಂದೇಶ ಬಂದಿದೆ. ನನಗೆ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರೂ ಉಚ್ಚಾಟನೆ ಮಾಡಿದ್ದರಿಂದ ಸಂದೇಹದ ಜೊತೆ ಸಂತೋಷವೂ ಆಗಿದೆ. ಈ ಮೊದಲೇ ಹೇಳಿದಂತೆ ಬಿಜೆಪಿ ಯಾವದೇ ಕ್ರಮ ಕೈಗೊಂಡರೂ ಅದನ್ನು ಸ್ವಾಗತಿಸುತ್ತೇನೆ’ ಎಂದು ಶಿವರಾಮ ಹೆಬ್ಬಾರ್ ಮಾಧ್ಯಮಗಳ ಎದುರು ಪ್ರತಿಕ್ರಿಯಿಸಿದ್ದಾರೆ.
ಇನ್ನೂ ಶಿವರಾಮ ಹೆಬ್ಬಾರ್ ಅವರನ್ನು ಆರು ವರ್ಷಗಳ ಕಾಲ ಬಿಜೆಪಿ ಉಚ್ಚಾಟಿಸಿದ್ದರಿಂದ ಮುಂದಿನ ಚುನಾವಣೆಗೆ ಅವರಿಗೆ ಬಿಜೆಪಿಯ ಬಿ ಪಾರಂ ಸಿಗುವುದಿಲ್ಲ. ಹೀಗಾಗಿ ಹೊಸ ಅಭ್ಯರ್ಥಿಗಳಲ್ಲಿನ ಪೈಪೋಟಿ ಇನ್ನಷ್ಟು ಜೋರಾಗಲಿದೆ.