ಭಾರತಕ್ಕೆ ಬಿಗ್ ಶಾಕ್, ಒಲಿಂಪಿಕ್ಸ್ನಲ್ಲಿ 50 ಕೆ.ಜಿ ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿದ ವಿನೇಶ್ ಫೋಗಟ್ ಅನರ್ಹ
ಪ್ಯಾರೀಸ್- ಭಾರತಕ್ಕೆ ಒಲಿಂಪಿಕ್ಸ್ ಕ್ರೀಡಾಕೂಟದ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕ ಸಿಗಲಿದೆ ಎಂಬ ಕನಸು ಕನಸಾಗಿಯೇ ಉಳಿದಿದೆ. ದೊಡ್ಡ ಕನಸು ಭಗ್ನವಾಗಿದೆ. ಚಿನ್ನದ ಪದಕ ಬಿಡಿ ಈಗ ಯಾವುದೇ ಪದಕವನ್ನು ಕೂಡ ಗೆಲ್ಲದೆ ವಿನೇಶ್ ಫೋಗಟ್ ಅನರ್ಹರಾಗಿ ಹೊರ ಬಿದ್ದಿದ್ದಾರೆ. ಹಾಗಾದ್ರೆ ಕುಸ್ತಿಪಟು ವಿನೇಶ್ ಫೋಗಟ್ ಫೈನಲ್ಸ್ಗೆ ಆಯ್ಕೆ ಆಗಿದ್ದರೂ ಅನರ್ಹ ಯಾಕೆ.??
ಪ್ಯಾರಿಸ್ ಒಲಂಪಿಕ್ 2024ರ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶ ಮಾಡಿದ್ದ ವಿನೇಶ್ ಫೋಗಟ್ ಅವರು, ಭಾರತಕ್ಕೆ ಈ ಬಾರಿ ಚಿನ್ನದ ಪದಕ ಗೆಲ್ಲಿಸಿಕೊಡುವ ಹುಮ್ಮಸ್ಸಿನಲ್ಲಿ ಇದ್ದರು. 50 ಕೆಜಿ ಮಹಿಳಾ ಕುಸ್ತಿ ವಿಭಾಗದಲ್ಲಿ ವಿನೇಶ್ ಫೋಗಟ್ ಫೈನಲ್ಸ್ ಪ್ರವೇಶಿಸಿದ್ದು, ಭಾರತಕ್ಕೆ ಮತ್ತೊಂದು ಪದಕ ಈಗ ಕನ್ಫರ್ಮ್ ಆಗಿತ್ತು. ಆದರೆ ಇದೀಗ ಭೀಕರ ಆಘಾತ ನೀಡುವ ಸುದ್ದಿಯೊಂದು ಹೊರ ಬಿದ್ದಿದ್ದು, ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಗಡೆ ಬಿದ್ದಿದ್ದಾರೆ.
ಇದಕ್ಕೆಲ್ಲ ಕಾರಣ ಅವರ ತೂಕದಲ್ಲಿ ಏರಿಕೆ ಆಗಿದ್ದು. ಅಂದಹಾಗೆ 50 ಕೆಜಿ ತೂಕ ವಿಭಾಗದ ಮಹಿಳಾ ಕುಸ್ತಿ ವಿಭಾಗದಲ್ಲಿ ಭಾಗವಹಿಸಿದ್ದ ವಿನೇಶ್ ಫೋಗಟ್ ಅವರ ತೂಕವು ಈಗ 100 ಗ್ರಾಂ ಹೆಚ್ಚಿರುವುದು ಕಂಡುಬಂದಿದೆ. ಇದೇ ಕಾರಣಕ್ಕೆ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ವಿನೇಶ್ ಅವರ ತೂಕ ಪರೀಕ್ಷೆಯಲ್ಲಿ ಅವರ ತೂಕ ನಿಗದಿತ ಮಿತಿಗಿಂತಲೂ ಹೆಚ್ಚಾದ ಕಾರಣಕ್ಕೆ ಅವರನ್ನ ಅನರ್ಹ ಎಂದು ಘೋಷಣೆ ಮಾಡಲಾಗಿದೆ.
ಭಾರತದ ಕ್ರೀಡಾಲೋಕಕ್ಕೆ ಇಂದಿನ ದಿನ ಇತಿಹಾಸದಲ್ಲೇ ಮರೆಯಲು ಆಗದು ಎನ್ನಬಹುದು. ಅಂದಹಾಗೆ ಆಗಸ್ಟ್ 6 ಅಂದ್ರೆ ನಿನ್ನೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಡೆದ ಮಹಿಳೆಯರ 50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು ವಿನೇಶ್ ಫೋಗಟ್. ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದಲೇ ಮಣಿಸಿ ಫೈನಲ್ ಪ್ರವೇಶಿಸಿದ್ದ ಭಾರತದ ವಿನೇಶ್ ಫೋಗಟ್ ಈಗ ಸ್ಪರ್ಧೆಯಿಂದಲೇ ಅನರ್ಹ ಆಗಿದ್ದಾರೆ.
ಭಾರತಕ್ಕೆ ಮತ್ತೊಮ್ಮೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರಿ ದೊಡ್ಡ ಆಘಾತ ಈಗ ಎದುರಾಗಿದೆ. ಅದರಲ್ಲೂ ಭಾರತೀಯ ಕುಸ್ತಿಪಟು ಒಬ್ಬರು ಮೊಟ್ಟಮೊದಲ ಬಾರಿಗೆ ಹೀಗೆ, ಕುಸ್ತಿ ವಿಭಾಗದಲ್ಲಿ ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂಬ ನಿರೀಕ್ಷೆ ಕೂಡ ಹುಸಿಯಾಗಿದೆ. ಮತ್ತೊಂದ್ಕಡೆ ಭಾರತ ಕೂಡ ಈ ಘಟನೆಯನ್ನ ತುಂಬಾ ಆಕ್ರೋಶದಿಂದ ಸ್ವೀಕಾರ ಮಾಡಿದೆ. ಅಲ್ಲದೆ ಈ ಬಗ್ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಕೂಡ ದಟ್ಟವಾಗಿದೆ. ಈ ವಿಚಾರ ಇದೀಗ ಜಾಗತಿಕ ಕ್ರೀಡಾ ಲೋಕದಲ್ಲೂ ಭಾರಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ.