ಶಿರಸಿ: ಶಿರಸಿ-ಹಾವೇರಿ ಹೆದ್ದಾರಿ ಕಾಮಗಾರಿಗೆ ತೊಡಕಾಗಿದ್ದ ಪಾರೆಸ್ಟ್ ಕ್ಲಿಯರೆನ್ಸ್ ಸೇರಿದಂತೆ ಎಲ್ಲಾ ಅಡೆತಡೆಗಳನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನಿವಾರಿಸಿ ಕೊಟ್ಟರೂ ಸಹ, ರಸ್ತೆ ಕಾಮಗಾರಿಯಲ್ಲಿ ಬೇಜವಾಬ್ದಾರಿ ತೋರಿರುವ ಗುತ್ತಿಗೆ ಪಡೆದುಕೊಂಡಿರುವ ಅಮ್ಮಾಪುರ ಕನ್ಸ್ಟ್ರಕ್ಷನ್ ಕಂಪನಿಗೆ ಐದು ದಿನಗಳ ಕಾಲ ಗಡುವು ಕೊಡುತ್ತಿದ್ದು, ಐದು ದಿನದೊಳಗೆ ಈ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚದಿದ್ದರೆ ಕಂಪನಿಯ ಮೇಲೆ ಬೆಂಗಳೂರಿನ ಉಚ್ಛನ್ಯಾಯಾಲಯದಲ್ಲಿ ಪಿಐಎಲ್ ಹಾಕುವುದರ ಜೊತೆಗೆ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಲು ಈಗಾಗಲೇ ಎಲ್ಲಾ ಸಿದ್ಧತೆಯನ್ನು ನಡೆಸಲಾಗಿದೆ. ಜೊತೆಗೆ ಕಂಪನಿಯನ್ನು ದೇಶಾದ್ಯಂತ ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಲು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದು ಹೋರಾಟ ಮಾಡಿಯೇ ಸಿದ್ಧ ಎಂದು ಬಿಜೆಪಿ ಮುಖಂಡ, ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
ಅವರು ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆ ಪಡೆದುಕೊಂಡಿರುವ ಅಮ್ಮಾಪುರ ಕಂಪನಿಯು ಮಾನ, ಮರ್ಯಾದೆ ಮತ್ತು ನಾಚಿಕೆಯನ್ನು ಬಿಟ್ಟು ಕೆಲಸ ಮಾಡುತ್ತಿದೆ. ಈ ಕಂಪನಿ ಮಾಡುತ್ತಿರುವ ತಪ್ಪಿನಿಂದ ಎಲ್ಲಾ ಜನಪ್ರತಿನಿಧಿಗಳ, ಸರ್ಕಾರದ ಮಾನವನ್ನೂ ಕಳೆಯುತ್ತಿದೆ. ಸಂಸದರು ಹಲವಾರು ಬಾರಿ ಕರೆದು ಮಾತನಾಡಿ ತಕ್ಷಣ ಗುಂಡಿ ಮುಚ್ಚಬೇಕೆಂದು ಆದೇಶವನ್ನು ನೀಡಿದ್ದಾರೆ. ಶಿರಸಿಯ ಶಾಸಕರಾದ ಭೀಮಣ್ಣ ನಾಯ್ಕ ಅವರೂ ಈ ಕುರಿತಾಗಿ ಮಾತನಾಡಿದ್ದಾರೆ. ಸಂಸದರ, ಶಾಸಕರ ಮಾತಿಗೆ ಮತ್ತು ಜನರ ಕಷ್ಟಕ್ಕೆ ಈ ಕಂಪನಿಯು ಸ್ಪಂದಿಸುತ್ತಿಲ್ಲ. ಇಷ್ಟು ದಿನಗಳ ಕಾಲ ಈ ಸಮಸ್ಯೆಯನ್ನು ನಾವೆಲ್ಲ ಅನುಭವಿಸಿದ್ದೇವೆ. ಆದರೆ ಇವತ್ತಿನಿಂದ ಈ ಹೋರಾಟದ ರೀತಿಯೇ ಬದಲಾಗುತ್ತದೆ ಎಂದರು.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಶಿವಕುಮಾರ ಅವರಿಗೆ ಕೇಳಿದರೆ, ಅವರು ರಸ್ತೆ ಗುಂಡಿ ಮುಚ್ಚುವ ಪೋಟೊ ಕಳಿಸುತ್ತಾರೆ. ಆದರೆ ಅಲ್ಲಿ ಕೇವಲ ಕಣ್ಣುಕಟ್ಟುವ ಕೆಲಸ ನಡೆದಂತೆ ಭಾಸವಾಗುತ್ತದೆ. ಕಂಪನಿಯು ರಸ್ತೆ ಗುಂಡಿ ಮುಚ್ಚುತ್ತಿರುವ ಹಳೆಯ ಫೋಟೋವನ್ನೇ ತೋರಿಸಿ ಎಲ್ಲರನ್ನೂ ನಂಬಿಸುವ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ನಮ್ಮ ಹೆಮ್ಮೆಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈ ಹೈವೇ ಕಾಮಗಾರಿಯ ಎಲ್ಲಾ ತೊಡಕುಗಳನ್ನು ನಿವಾರಣೆ ಮಾಡಲು ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದಾರೆ. ಕೆಲಸ ಮಾಡಲು ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ ಎಂದರು.
ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ ಫಾರೆಸ್ಟ್ ಕ್ಲಿಯರೆನ್ಸ್ ಎನ್ನುವ ನೆಪವನ್ನು ಒಡ್ಡಿ ತಮ್ಮ ಕೆಲಸದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅರಣ್ಯ ಪ್ರದೇಶವಿರದ ನಗರ ಪ್ರದೇಶದಲ್ಲಿಯೂ ಸಹ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು. ನಾವು ಪಕ್ಷಾತೀತವಾಗಿ ಮಾತನಾಡುತ್ತಿದ್ದು , ರಸ್ತೆ ಆಸ್ಪತ್ರೆ, ಬಸ್ ಸ್ಟ್ಯಾಂಡ್ ನಂತಹ ಸಾರ್ವಜನಿಕ ಮೂಲ ಭೂತ ವಿಷಯಗಳಲ್ಲಿ ವಿಷಯಗಳಲ್ಲಿ ಎಲ್ಲಾ ಪಕ್ಷಗಳೂ ಒಂದೇ. ನಾವು ನಾಗರೀಕರ ಪರವಾಗಿ ಮಾತನಾಡುತ್ತಿದ್ದೇವಯೇ ವಿನಃ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ, ಇದು ನಮ್ಮ ನೇರವಾದ ಎಚ್ಚರಿಕೆ ಎಂದರು.
ನಿವೃತ್ತ ಇಂಜಿನಿಯರ್ ವಿ. ಎಂ ಭಟ್ ಮಾತನಾಡಿ, ಕುಮಟಾ ತಡಸ ರಸ್ತೆಯ ಅವ್ಯವಸ್ಥೆಯ ಕುರಿತು ವಿವರಿಸಿದರು. ಕುಮಟಾ ತಡಸ ರಸ್ತೆಯು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ರಸ್ತೆಯಾಗಿದೆ. ಜನರು ಈಗಾಗಲೇ ಹುಬ್ಬಳ್ಳಿ ರಸ್ತೆಯಲ್ಲಿ ಸಂಚಾರಿಸುವುದನ್ನು ಬಿಟ್ಟು ಬೇರೆ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ರಾಜ್ಯ ಹೆದ್ದಾರಿಯಾಗಿರುವ ಕುಮಟಾ ತಡಸ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಬೇಕೆಂದು ವಿನಂತಿಸಿದರು. ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಯು ಶಿರಸಿಯಲ್ಲಿ 5 ಕಿ.ಮೀ, ಯಲ್ಲಾಪುರದಲ್ಲಿ 45 ಕಿ.ಮೀ ಮತ್ತು ಶಿಗ್ಗಾಂವಿ ಕ್ಷೇತ್ರದಲ್ಲಿ 10 ಕಿ.ಮೀ ಹಂಚಿಕೊಂಡಿದೆ. ಖಾನಾಪುರ ತಾಳಗುಪ್ಪ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿಸಲು ಅನುಮತಿ ದೊರೆತಿದೆ. ಹಾಗೆಯೇ ಕುಮಟಾ ತಡಸ ರಸ್ತೆಯೂ ರಾಷ್ಟ್ರೀಯ ಹೆದ್ದಾರಿಯಾದರೆ ಶಿರಸಿ, ಯಲ್ಲಾಪುರ ಮತ್ತು ಶಿಗ್ಗಾಂವಿ ಕ್ಷೇತ್ರಗಳು ಆರ್ಥಿಕವಾಗಿ ಬೆಳವಣಿಗೆ ಹೊಂದುತ್ತವೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ವಿನಂತಿಸುವಂತೆ ಜನಪ್ರತಿನಿಧಿಗಳಿಗೆ ಮತ್ತು ರಾಜ್ಯ ಹೆದ್ದಾರಿ ಇಲಾಖೆಗೆ ಕೇಳಿಕೊಂಡರು. ಮಾನ್ಯ ಲೋಕೋಪಯೋಗಿ ಸಚಿವರಿಗೆ ಕುಮಟಾ ತಡಸ ರಸ್ತೆಯ ಗುಂಡಿಗಳನ್ನು ಮುಚ್ಚಿಸಬೇಕಂದು ಹೇಳಿದರು. ಜನರು ಸಂಚಾರಕ್ಕೆ ಕುಮಟಾ ತಡಸ ರಸ್ತೆಯನ್ನು ಬಿಟ್ಟು ಯಲ್ಲಾಪುರ ಮಾರ್ಗವಾಗಿ ಹೋಗುತ್ತಿದ್ದು ಜನತೆಯ ಇಂಧನ ಸಮಯ ಎರಡೂ ವ್ಯರ್ಥವಾಗುತ್ತಿದೆ ಎಂದರು. ಹಾಗಾಗಿ ತುರ್ತು ದುರಸ್ತಿಯನ್ನು ಮಾಡಿ ರಾಷ್ಟ್ರೀಯ ಹೆದ್ದಾರಿಯನ್ನಾಗಿಸಬೇಕೆಂದು ಆಗ್ರ ಹಿಸಿದರು.
ಮಾಜಿ ಜಿ.ಪಂ ಸದಸ್ಯ ಹಾಲಪ್ಪ ಜಕ್ಕಣ್ಣನವರ್ ಮಾತನಾಡಿ ಹಿಂದಿನ ಹತ್ತು ವರ್ಷಗಳ ಭಾರತವು ಹೊಸ ಭಾರತ ಎಂದು ಕರೆಸಿಕೊಳ್ಳುತ್ತಿದೆ. ಹಿಂದೆ ಒಂದು ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಐವತ್ತು – ಅರವತ್ತು ವರ್ಷಗಳು ಬೇಕಾಗಿದ್ದವು. ಆದರೆ ಪ್ರಧಾನಿ ಮೋದಿಯವರ ಸರ್ಕಾರದಲ್ಲಿ ಶೀರ್ಘ ಕಾಮಗಾರಿ ನಡೆಯುತ್ತಿದೆ. 2019ಕ್ಕೆ ಪ್ರಾರಂಭಗೊಂಡು 2024ರಲ್ಲಿ ಮುಗಿಯಬೇಕಿದ್ದ ಈ ರಸ್ತೆ ಯೋಜನೆಯು ಹೊಸ ಭಾರತಕ್ಕೆ ನ್ಯೂನ್ಯತೆಯಾದಂತೆ ತೋರುತ್ತಿದೆ. ಶಿರಸಿ, ಬಿಸಲಕೊಪ್ಪ, ದಾಸನಕೊಪ್ಪ, ಸುಮ್ಮಸಗಿ, ನಾಲ್ಕರ ಕ್ರಾಸ್ ವರೆಗೆ ಫಾರೆಸ್ಟ್ ಕ್ಲಿಯರೆನ್ಸ್ ಆಗಿದೆ. ಅಮ್ಮಾಪುರಂ ಕಂಪನಿಯವರು ಸರಿಯಾಗಿ ಕೆಲಸವನ್ನು ಮಾಡುತ್ತಿಲ್ಲ ಎಂದು ಆರೋಪಿಸಿದರು.
ನಿವೃತ್ತ ಆರ್.ಟಿ.ಓ ಜಿ. ಎಸ್. ಹೆಗಡೆ ಮಾತನಾಡಿ ಕಂಪನಿಯವರು ನುಣುಚಿಕೊಳ್ಳಲು ಸಾಧ್ಯವೇ ಇಲ್ಲ. ಕೆಲಸದ ಟೆಂಡರ್ ಆದಾಗಿನಿಂದ ಮುಗಿಯುವವರೆಗೆ ಅಪಘಾತ ಅವಘಡಗಳು ಸಂಭವಿಸಿದ್ದಲ್ಲಿ ಕಂಪನಿಯ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ರಾಷ್ಟೀಯ ಹೆದ್ದಾರಿ ಸುರಕ್ಷತಾ ಪ್ರಾಧಿಕಾರಕ್ಕಿರುತ್ತದೆ. ಈ ಹಿನ್ನೆಲೆಯಲ್ಲಿ ರಾಷ್ಟೀಯ ಹೆದ್ದಾರಿ ಸುರಕ್ಷತಾ ಪ್ರಾಧಿಕಾರಕ್ಕೂ ದೂರು ಸಲ್ಲಿಸಲಿದ್ದೇವೆ ಎಂದರು.
ಪ್ರಮುಖರಾದ ಮಹೇಂದ್ರ ಸಾಲೇಕೊಪ್ಪ ಮಾತನಾಡಿ, ರಸ್ತೆ ಗುತ್ತಿಗೆದಾರರು ಇಂದು ರಸ್ತೆಯ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ. ಮಾನವೀಯತೆ ದೃಷ್ಠಿಯಿಂದ ಗುತ್ತಿಗೆದಾರರನ್ನು ಬಂದ್ ಮಾಡುವ ಬದಲು ರಸ್ತೆಯನ್ನು ಹೇಗೆ ನಿರ್ವಹಣೆ ಮಾಡುವುದನ್ನು ಯೋಚನೆ ಮಾಡಬೇಕು. ಸಂಸದರು ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಟ್ಟರೂ ಗುತ್ತಿಗೆದಾರರು ಸರಿಯಾಗಿ ಉತ್ತರಿಸುತ್ತಿಲ್ಲ, ಇದರಿಂದ ಜನರಲ್ಲಿ ಗೊಂದಲ ಮೂಡುವುದು ಸಹಜ. ಇಂದು ಶಿರಸಿಯಿಂದ ಹುಬ್ಬಳ್ಳಿಗೆ ಹೋಗಲು ಯಾವುದೇ ಸದರಿಯೂ ರಸ್ತೆಯು ಸರಿಯಾಗಿಲ್ಲ. ಶಿರಸಿ – ಹಾವೇರಿ ರಸ್ತೆಯಲ್ಲಿ ದಿನಕ್ಕೆ 5-6 ಸಾವಿರ ವಾಹನಗಳು ಚಲಿಸುತ್ತವೆ. ರಸ್ತೆಯನ್ನು ಸರಿಮಾಡದೆ ಇದ್ದರೇ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದರು.
ಶಿರಸಿ-ಹಾವೇರಿ ರಸ್ತೆ ಸಮಸ್ಯೆ ವಿಚಾರದಲ್ಲಿ ಇವತ್ತಿನ ವರೆಗೆ ಒಂದು ಲೆಕ್ಕ, ಇನ್ನು ಮುಂದೆ ಬೇರೇಯದೇ ಲೆಕ್ಕ. ಗುತ್ತಿಗೆ ಕಂಪನಿ ಹೇಗೆ ಗುಂಡಿಗಳನ್ನು ಮುಚ್ಚುವುದಿಲ್ಲ ಎಂದು ನಾನೂ ನೋಡುತ್ತೇನೆ. ಅವರಿಂದ ರಸ್ತೆ ಗುಂಡಿಗಳನ್ನು ಮುಚ್ಚಿಸಿಯೇ ಸಿದ್ಧ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ, ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ಶಿರಸಿ -ಹಾವೇರಿ ರಸ್ತೆಯ ಗುತ್ತಿಗೆ ಪಡೆದುಕೊಂಡಿರುವ ಅಮ್ಮಾಪುರ ಕನ್ಸ್ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಶಿರಸಿಯ ಡಿವೈಎಸ್ಪಿ ಕಛೇರಿಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ದೀಪನ್ ಅವರಿಗೆ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ವೇಳೆ ನಿವೃತ್ತ ಇಂಜಿನಿಯರ್ ವಿ.ಎಂ.ಭಟ್ಟ, ಮಾಜಿ ಜಿಪಂ ಸದಸ್ಯ ಹಾಲಪ್ಪ ಜಕಣ್ಣನವರ್, ನಿವೃತ್ತ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ, ನಾಗರಾಜ, ಅನಂತ ಬಾಳೆಕೊಪ್ಪ ಸೇರಿದಂತೆ ಇನ್ನಿತರರು ಇದ್ದರು.