ಯಲ್ಲಾಪುರ-ಯಲ್ಲಾ
ಪುರ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಕ್ರೂರವಾಗಿ ಹತ್ಯೆಯಾಗಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಮದುವೆಗೆ ಒಪ್ಪದ ಕಾರಣಕ್ಕೆ ಮುಸ್ಲಿಂ ಯುವಕನೊಬ್ಬ ಹಿಂಧೂ ಮಹಿಳೆಯ ಕತ್ತಿಗೆ ಚಾಕು ಇರಿದು ಹತ್ಯೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಯಲ್ಲಾಪುರದ ಕಾಳಮ್ಮ ನಗರ ನಿವಾಸಿ ರಂಜಿತಾ ಮಲ್ಲಪ್ಪ ಬನ್ಸೋಡೆ ಅವರು ರಾಮಾಪುರದ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ವಾಸವಾಗಿದ್ದು, ಹಿಂದಿನ ಮದುವೆಯಿಂದ ದೂರವಾಗಿ ಹಲವು ವರ್ಷಗಳಿಂದ ಒಬ್ಬ ಮಗನೊಂದಿಗೆ ಜೀವನ ನಡೆಸುತ್ತಿದ್ದರು.ರಂಜಿತಾ ಮತ್ತು ಯಳ್ಳೂರು ಗ್ರಾಮದ ರಫೀಕ್ ಎಂಬುವರ ನಡುವೆ ಕೆಲವು ವರ್ಷಗಳಿಂದ ಪರಿಚಯವಿದ್ದು, ಅದು ಆತ್ಮೀಯತೆಯ ಹಂತ ತಲುಪಿತ್ತು. ಎರಡೂ ಕುಟುಂಬಗಳಿಗೂ ಪರಸ್ಪರ ಪರಿಚಯ ಇದ್ದ ಕಾರಣ ರಫೀಕ್ ಪದೇಪದೇ ರಂಜಿತಾ ಮನೆಗೆ ಭೇಟಿ ನೀಡುತ್ತಿದ್ದನೆಂದು ಹೇಳಲಾಗಿದೆ. ಆದರೆ, ಮದುವೆ ವಿಷಯಕ್ಕೆ ಬಂದಾಗ ರಂಜಿತಾ ಸ್ಪಷ್ಟವಾಗಿ ನಿರಾಕರಿಸಿದ್ದರು.
ಮದುವೆಗಾಗಿ ನಿರಂತರ ಒತ್ತಡ ಹೇರಲಾಗುತ್ತಿತ್ತು ಎನ್ನಲಾಗಿದ್ದು, “ನಾವು ಹೀಗೆಯೇ ಇರೋಣ, ಮದುವೆ ಬೇಡ” ಎಂಬ ರಂಜಿತಾ ಅವರ ನಿಲುವೇ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶನಿವಾರ ಮಧ್ಯಾಹ್ನ ಶಾಲೆಯಿಂದ ಮನೆಗೆ ಮರಳುತ್ತಿದ್ದ ವೇಳೆ ರಫೀಕ್ ರಂಜಿತಾರನ್ನು ತಡೆದು ಮತ್ತೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಮಾತಿನ ಜಗಳ ತೀವ್ರಗೊಂಡು, ಕೋಪಗೊಂಡ ರಫೀಕ್ ಚಾಕುವಿನಿಂದ ಅವರ ಕತ್ತಿಗೆ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.
ಗಂಭೀರ ಗಾಯಗೊಂಡ ರಂಜಿತಾರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹುಬ್ಬಳ್ಳಿಯ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

