
ಯಲ್ಲಾಪುರ:ಯಲ್ಲಾಪುರದಲ್ಲಿ ದಲಿತ ಮಹಿಳೆ ರಂಜಿತಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆ ಕಂಡುಬಂದಿದೆ. ಕೊಲೆ ನಡೆಸಿ ಪರಾರಿಯಾಗಿದ್ದ ಆರೋಪಿ ರಫೀಕ್ ಎಂಬಾತ ಸಮೀಪದ ಕಾಜಲವಾಡ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಪ್ರಾಥಮಿಕ ಮಾಹಿತಿ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ನಿನ್ನೆ ಮಧ್ಯಾಹ್ನ ರಂಜಿತಾ ಅವರ ಕುತ್ತಿಗೆಗೆ ಇರಿದು ಕೊಲೆ ಮಾಡಿದ ಬಳಿಕ ರಫೀಕ್ ಪರಾರಿಯಾಗಿದ್ದನು. ಈ ಹಿನ್ನೆಲೆ ಆರೋಪಿಯ ಪತ್ತೆಗಾಗಿ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಈ ನಡುವೆ ಕಾಜಲವಾಡ ಅರಣ್ಯದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, ಅದು ರಫೀಕ್‌ನದ್ದೇ ಎಂಬ ಅನುಮಾನ ವ್ಯಕ್ತವಾಗಿದೆ.

ರಾಮಾಪುರದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ರಂಜಿತಾ ಅವರಿಗೆ ರಫೀಕ್ ಮದುವೆಗೆ ಒತ್ತಡ ಹಾಕುತ್ತಿದ್ದನು ಎನ್ನಲಾಗಿದೆ. ಇದಕ್ಕೆ ಅವರು ನಿರಾಕರಿಸಿದ್ದರಿಂದ, ನಿನ್ನೆ ಮಧ್ಯಾಹ್ನ ಶಾಲೆಯಿಂದ ಮನೆಗೆ ಮರಳುವ ವೇಳೆ ಕಾಳಮ್ಮ ನಗರ ಸಮೀಪ ರಫೀಕ್ ಮಾರಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂಬ ಆರೋಪವಿದೆ.
ಈ ಘಟನೆ ಯಲ್ಲಾಪುರದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಹತ್ಯೆಯನ್ನು ಖಂಡಿಸಿ ಇಂದು ಪ್ರತಿಭಟನೆ ನಡೆಸಲು ಕೆಲವು ಸಂಘಟನೆಗಳು ಮುಂದಾಗಿದ್ದವು.

ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಯನ್ನು ಮನಗಂಡು ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರು.
ಅರಣ್ಯದಲ್ಲಿ ಪತ್ತೆಯಾದ ಶವದ ಮಹಜರು ಕಾರ್ಯಾಚರಣೆಯನ್ನು ಪೊಲೀಸರು ನಡೆಸಿದ್ದು, ಮೃತ ವ್ಯಕ್ತಿ ರಫೀಕ್ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಆತನ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

