
ಹೊನ್ನಾವರ, ಜ.07: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ–ಸುಳೆಮುರ್ಕಿ ಕ್ರಾಸ್ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ.

ಅತಿವೇಗದಲ್ಲಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮೊದಲು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು, ಬಳಿಕ ಕಂದಕಕ್ಕೆ ಉರುಳಿ ಬಿದ್ದಿರುವ ಅನುಮಾನ ವ್ಯಕ್ತವಾಗಿದೆ. ಕಂದಕಕ್ಕೆ ಬೀಳುತ್ತಿದ್ದಂತೆಯೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು, ಕೆಲವೇ ಕ್ಷಣಗಳಲ್ಲಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ.
ವಾಹನದೊಳಗೆ ಸಿಲುಕಿದ್ದ ಇಬ್ಬರು ಪ್ರಯಾಣಿಕರು ಹೊರಬರಲು ಸಾಧ್ಯವಾಗದೆ ಬೆಂಕಿಗೆ ಆಹುತಿಯಾಗಿದ್ದಾರೆ. ಬೆಂಕಿಯ ತೀವ್ರತೆಯಿಂದ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಮೃತರ ಗುರುತು ಪತ್ತೆ ಹಚ್ಚಲು ಕಷ್ಟವಾಗುವ ಸ್ಥಿತಿ ನಿರ್ಮಾಣವಾಗಿದೆ.
ಇದಲ್ಲದೆ, ವಾಹನದ ನಂಬರ್ ಪ್ಲೇಟ್ ಕೂಡ ಸುಟ್ಟು ನಾಶವಾಗಿರುವುದರಿಂದ, ಕಾರಿನ ಮಾಲೀಕತ್ವ ಹಾಗೂ ಮೃತರ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಸುದ್ದಿ ತಿಳಿದ ತಕ್ಷಣ ಹೊನ್ನಾವರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಪಘಾತದ ನಿಖರ ಕಾರಣ ಹಾಗೂ ಮೃತರ ವಿವರ ಪತ್ತೆ ಹಚ್ಚುವ ಕೆಲಸ ಮುಂದುವರಿಸಿದ್ದಾರೆ.

