
ಕಾರವಾರ: ಕಾರವಾರದ ಕದಂಬ ನೌಕಾನೆಲೆಯಲ್ಲಿ ಲಂಚದ ಹಾವಳಿ ಹೆಚ್ಚಾಗಿದ್ದು, ಅಧಿಕಾರಿಗಳ ನಡೆಗಳಿಂದ ಭೂಮಿ ಕಳೆದುಕೊಂಡ ಸ್ಥಳೀಯ ಕುಟುಂಬಗಳು ಹಾಗೂ ನಿರಾಶ್ರಿತರು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮೀನುಗಾರ ಮುಖಂಡ ಗಣಪತಿ ಮಾಂಗ್ರೇ ಆರೋಪಿಸಿದ್ದಾರೆ.

ನೌಕಾನೆಲೆ ನಿರ್ಮಾಣದ ವೇಳೆ ಸ್ಥಳೀಯರು ಮತ್ತು ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ, ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು. ಆದರೆ ಪ್ರಸ್ತುತ ಪರಿಸ್ಥಿತಿ ಆ ಭರವಸೆಗೆ ವಿರುದ್ಧವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉದ್ಯೋಗ ನೀಡುವ ಸಂದರ್ಭದಲ್ಲಿ ಅರ್ಹ ಸ್ಥಳೀಯರನ್ನು ಕಡೆಗಣಿಸಿ, ಲಂಚದ ಮೂಲಕ ಹೊರಗಿನವರಿಗೆ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.ನಿಯಮಾನುಸಾರ ಶೇ.60ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಬೇಕಿದ್ದರೂ, ಆ ನಿಯಮ ಪಾಲನೆಯಾಗುತ್ತಿಲ್ಲ. ಒಡಿಶಾ ಹಾಗೂ ಆಂಧ್ರಪ್ರದೇಶದ ನೂರಾರು ಯುವಕರಿಗೆ ತರಬೇತಿ ನೀಡಿ ಅವರನ್ನು ಇಲ್ಲಿ ಖಾಯಂ ನೌಕರರನ್ನಾಗಿ ನೇಮಿಸಲಾಗಿದೆ. ಇದಕ್ಕೆ ನೌಕಾನೆಲೆಯ ಕೆಲವು ಅಧಿಕಾರಿಗಳು ಮತ್ತು ಸಂಘಟನೆಗಳು ಕಾರಣವಾಗಿವೆ ಎಂದು ಮುಖಂಡರು ದೂರಿದ್ದಾರೆ.

ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿರುವ ಕೆಲವೇ ಕೆಲವು ಸ್ಥಳೀಯ ನೌಕರರನ್ನು ಜಾತಿ ಹಾಗೂ ಭೂಮಿ ಕಳೆದುಕೊಂಡ ಹಿನ್ನೆಲೆಯನ್ನು ಮುಂದಿಟ್ಟು ಅವಮಾನಿಸುವ, ಹೀಗಳೆಯುವ ಘಟನೆಗಳು ನಡೆಯುತ್ತಿವೆ ಎನ್ನಲಾಗಿದೆ. ಭೂಮಿ ನೀಡಿ ಬದುಕು ಕಳೆದುಕೊಂಡವರನ್ನು ಕೀಳು ದೃಷ್ಟಿಯಿಂದ ನೋಡುವ ಅಧಿಕಾರಿಗಳ ವರ್ತನೆ ಅಮಾನವೀಯವಾಗಿದೆ ಎಂದು ಗಣಪತಿ ಮಾಂಗ್ರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ನೌಕಾನೆಲೆ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಅವಕಾಶ ನೀಡುವ ಭರವಸೆಯನ್ನು 9 ವರ್ಷಗಳಾದರೂ ಇನ್ನೂ ಜಾರಿಗೆ ತರಲಾಗಿಲ್ಲ ಎಂದು ವಿನೋದ ಕುಡ್ತಲಕರ್ ಹೇಳಿದ್ದಾರೆ. ಕಾನೂನಿನಲ್ಲಿ ಅವಕಾಶವಿದ್ದರೂ ಮೀನುಗಾರರನ್ನು ಒಳಗೆ ಬಿಡದೆ ಕಿರುಕುಳ ನೀಡಲಾಗುತ್ತಿದೆ. ನೌಕಾನೆಲೆಯ ಒಳಭಾಗದಲ್ಲಿ ಮೀನು ಸಂಪತ್ತು ಹೆಚ್ಚಾಗಿದ್ದರೂ, ಸ್ಥಳೀಯ ಮೀನುಗಾರರಿಗೆ ಅದರಿಂದ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.ನೌಕಾನೆಲೆಯಲ್ಲಿ ನಡೆಯುತ್ತಿರುವ ಗುತ್ತಿಗೆ ಕಾಮಗಾರಿಗಳಲ್ಲೂ ಸ್ಥಳೀಯ ಗುತ್ತಿಗೆದಾರರನ್ನು ನಿರ್ಲಕ್ಷಿಸಿ, ಹೊರರಾಜ್ಯದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಭೂಮಿ ಕಳೆದುಕೊಂಡ ಕುಟುಂಬಗಳ ಜೀವನೋಪಾಯಕ್ಕೆ ಭಾರಿ ಹೊಡೆತ ಬಿದ್ದಿದೆ. ವಯೋಮಿತಿ ಮೀರಿದ ನಿರಾಶ್ರಿತರಿಗೂ ಉದ್ಯೋಗ ಕಲ್ಪಿಸುವ ಕುರಿತು ಸರ್ಕಾರ ವಿಶೇಷ ಗಮನ ಹರಿಸಬೇಕು ಎಂದು ಆಗ್ರಹಿಸಲಾಗಿದೆ.
ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟಕ್ಕೆ ಮುಂದಾಗುವುದಾಗಿ ವಿನೋದ ನಾಯ್ಕ ಮತ್ತು ಪವನ್ ದುರ್ಗೇಕರ್ ಎಚ್ಚರಿಕೆ ನೀಡಿದ್ದಾರೆ.

