
ಭಟ್ಕಳ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಗೆ ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ತಿದ್ದುಪಡಿ ಕುರಿತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯ ಮೂಲಕ ಜೀವನ ಸಾಗಿಸುತ್ತಿರುವ ದೇಶದ ಕೋಟಿ ಸಂಖ್ಯೆಯ ಕಾರ್ಮಿಕರು ಹಾಗೂ ಲಕ್ಷಾಂತರ ಮಹಿಳೆಯರ ಬದುಕಿನ ಭದ್ರತೆಗೆ ಈ ತಿದ್ದುಪಡಿ ಗಂಭೀರ ಹೊಡೆತ ನೀಡುವಂತಿದೆ ಎಂದು ಅಭಿಪ್ರಾಯಪಟ್ಟರು. ಗ್ರಾಮೀಣ ಪ್ರದೇಶದ ಜನರ ಆರ್ಥಿಕ ನೆಮ್ಮದಿಗೆ ಸಹಾಯಕವಾಗಿದ್ದ ಯೋಜನೆಯನ್ನು ದುರ್ಬಲಗೊಳಿಸುವ ಕೆಲಸ ಇದರಿಂದ ನಡೆಯುತ್ತಿದೆ ಎಂದು ಹೇಳಿದರು.

ವಿಬಿ ರಾಮ್ ಜಿ ಸೇರಿದಂತೆ ಹೊಸ ವ್ಯವಸ್ಥೆಗಳ ಹೆಸರಿನಲ್ಲಿ ನರೇಗಾ ಕೂಲಿಕಾರ್ಮಿಕರ ಹಕ್ಕುಗಳನ್ನು ಕಡಿತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದು ಬಡವರ ಪರವಾಗಿಲ್ಲದ ಕ್ರಮವಾಗಿದ್ದು, ಗ್ರಾಮೀಣ ಭಾರತದ ಅಸ್ತಿತ್ವಕ್ಕೂ ಸವಾಲಾಗಿ ಪರಿಣಮಿಸಬಹುದು ಎಂದು ಸಚಿವ ವೈದ್ಯ ಎಚ್ಚರಿಸಿದರು.ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕತ್ವದ ಸೂಚನೆಯಂತೆ ರಾಜ್ಯದಾದ್ಯಂತ ಈ ತಿದ್ದುಪಡಿಯ ವಿರುದ್ಧ ಜಾಗೃತಿ ಹಾಗೂ ಹೋರಾಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನರೇಗಾ ತಿದ್ದುಪಡಿಯಿಂದ ಜನರಿಗೆ ಉಂಟಾಗುವ ಅನ್ಯಾಯಗಳು ಮತ್ತು ಸಮಸ್ಯೆಗಳ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ನರೇಗಾ ಯೋಜನೆಯ ಮೂಲ ಆಶಯಕ್ಕೆ ವಿರುದ್ಧವಾಗಿರುವ ಈ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದ ಸಚಿವ ಮಂಕಾಳ್ ವೈದ್ಯ, ಅಗತ್ಯವಿದ್ದರೆ ತೀವ್ರ ಹೋರಾಟಕ್ಕೂ ಕಾಂಗ್ರೆಸ್ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.

