
ಭಟ್ಕಳ:ಉತ್ತರ ಕನ್ನಡ ಜಿಲ್ಲೆಯ ಪರಿಸರ ಮತ್ತು ಜನಜೀವನಕ್ಕೆ ಹಾನಿಕಾರಕವಾಗುವ ಸಾಧ್ಯತೆ ಇರುವ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಹಾಗೂ ಬೇಡ್ತಿ–ಅಘನಾಶಿನಿ ನದಿ ಜೋಡಣೆ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಜಾರಿಗೆ ತರಬಾರದು ಎಂದು ಮಾಜಿ ಸಚಿವ ಶಿವಾನಂದ ನಾಯ್ಕ ಅವರು ಕಟುವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಜನರ ಅಭಿಪ್ರಾಯವನ್ನು ಪರಿಗಣಿಸದೆ ಈ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ, ಭಟ್ಕಳ ಹಾಗೂ ಹೊನ್ನಾವರ ಬಿಜೆಪಿ ಮಂಡಲಗಳ ವತಿಯಿಂದ ಭಟ್ಕಳದ ಬಿಜೆಪಿ ಕಚೇರಿಯಲ್ಲಿ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ನಿಲುವಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ವೇಳೆ ಮಾತನಾಡಿದ ಶಿವಾನಂದ ನಾಯ್ಕ ಅವರು, ಜಿಲ್ಲೆಯ ಜನರ ಬದುಕು, ಕೃಷಿ, ಅರಣ್ಯ ಹಾಗೂ ಪರಿಸರಕ್ಕೆ ಅಪಾಯ ಉಂಟುಮಾಡುವ ಯಾವುದೇ ಯೋಜನೆಗಳನ್ನು ಬಲವಂತವಾಗಿ ಜಾರಿಗೆ ತರಲು ಮುಂದಾದರೆ, ಅದಕ್ಕೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾವಾಸಿಗಳ ಹಿತಾಸಕ್ತಿಯನ್ನು ಕಡೆಗಣಿಸಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಬಿಜೆಪಿ ಸಹಿಸುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸುನೀಲ್ ನಾಯ್ಕ, ಬಿಜೆಪಿ ಮುಖಂಡ ಗೋವಿಂದ ನಾಯ್ಕ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
