
ಬೆಂಗಳೂರು: ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರಿಗೆ ಸಂಬಂಧಿಸಿದಂತೆ ಎಂದು ಹೇಳಲಾಗುತ್ತಿರುವ ಖಾಸಗಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ. ವಿಡಿಯೋದಲ್ಲಿರುವ ದೃಶ್ಯಗಳು ಪೊಲೀಸ್ ಇಲಾಖೆಯ ಗೌರವ ಮತ್ತು ಶಿಸ್ತು ಕುರಿತಂತೆ ಪ್ರಶ್ನೆಗಳನ್ನು ಎಬ್ಬಿಸಿವೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ವೈರಲ್ ಆಗಿರುವ ದೃಶ್ಯಗಳು ಪೊಲೀಸ್ ಕಚೇರಿ ಒಳಾಂಗಣದಲ್ಲಿ ಸೆರೆಯಾಗಿರುವಂತೆ ಕಾಣುತ್ತಿದ್ದು, ಅಧಿಕಾರಿಯೊಬ್ಬರು ಮಹಿಳೆಯರೊಂದಿಗೆ ಅನೌಪಚಾರಿಕವಾಗಿ ವರ್ತಿಸುತ್ತಿರುವುದು ಕಂಡುಬರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಈ ವಿಡಿಯೋಗಳ ಪ್ರಾಮಾಣಿಕತೆ ಹಾಗೂ ಸಂದರ್ಭದ ಕುರಿತು ಸರ್ಕಾರ ಅಥವಾ ಪೊಲೀಸ್ ಇಲಾಖೆಯಿಂದ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.

ಹಿನ್ನಲೆ ಮತ್ತು ಸೇವಾ ವಿವರ
ಸಂಬಂಧಿತ ಅಧಿಕಾರಿ ಹಿಂದೆ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕಡ್ಡಾಯ ರಜೆಗೆ ಕಳುಹಿಸಲ್ಪಟ್ಟಿದ್ದರು. ಈ ಪ್ರಕರಣದಲ್ಲಿ ಪೊಲೀಸ್ ಶಿಷ್ಟಾಚಾರ ಸೇವೆಗಳ ದುರುಪಯೋಗದ ಆರೋಪ ಕೇಳಿಬಂದ ಹಿನ್ನೆಲೆ ಗೌರವ್ ಗುಪ್ತಾ ಸಮಿತಿಯನ್ನು ರಚಿಸಿ ತನಿಖೆ ನಡೆಸಲಾಗಿತ್ತು. ನಂತರ ಅವರು ಮರುನಿಯುಕ್ತಿಗೊಂಡು ವಿವಿಧ ಮಹತ್ವದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.ವೈರಲ್ ವಿಡಿಯೋಗಳು ಒಂದು ವರ್ಷದ ಹಿಂದೆ ದಾಖಲಾದವು ಎಂಬ ಮಾಹಿತಿ ಹರಿದಾಡುತ್ತಿದ್ದು, ಈ ಘಟನೆಗಳು ಇತ್ತೀಚಿನ ಪ್ರಕರಣಗಳಿಗೆ ಮುನ್ನ ನಡೆದಿರುವುದಾಗಿ ಹೇಳಲಾಗುತ್ತಿದೆ. ಸದ್ಯ ಅವರು ಡಿಸಿಆರ್‌ಇ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕ್ರಮಕ್ಕೆ ಆಗ್ರಹ
ಈ ವಿಚಾರಕ್ಕೆ ಸಂಬಂಧಿಸಿ ಮಹಿಳಾ ಸಂಘಟನೆಗಳು ಮತ್ತು ನಾಗರಿಕ ಸಂಘಟನೆಗಳು ಸರ್ಕಾರ ಸ್ಪಷ್ಟ ತನಿಖೆ ನಡೆಸಬೇಕು ಹಾಗೂ ಸತ್ಯಾಂಶ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿವೆ. ಪೊಲೀಸ್ ಇಲಾಖೆಯಂತಹ ಶಿಸ್ತುಬದ್ಧ ಸಂಸ್ಥೆಯ ಗೌರವ ಕಾಪಾಡುವುದು ಅಗತ್ಯ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಈ ಪ್ರಕರಣದ ಬಗ್ಗೆ ಸರ್ಕಾರ ಅಥವಾ ಪೊಲೀಸ್ ಇಲಾಖೆಯಿಂದ ಅಧಿಕೃತ ಸ್ಪಷ್ಟನೆ ಹೊರಬರಬೇಕಿದೆ. ತನಿಖೆಯ ಬಳಿಕವೇ ಸತ್ಯಾಂಶ ಸ್ಪಷ್ಟವಾಗಲಿದೆ ಎಂದು ವೀಕ್ಷಕರು ಹೇಳುತ್ತಿದ್ದಾರೆ.

