
ಭಟ್ಕಳ: ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸಿ ಮಹಿಳೆಯರಿಗೆ ಅಸಭ್ಯ ಸಂದೇಶಗಳನ್ನು ಕಳುಹಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಭಟ್ಕಳ ಪಟ್ಟಣ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ.
ಕುಮಟಾ ತಾಲೂಕಿನ ತುಳಸಿಕಟ್ಟೆ ಪ್ರದೇಶದ ನಿವಾಸಿ, ಮೆಹ್ರಾನ್ ಮೆಹ್ತಾಬ್ ಶಾಬಂದರಿ (19) ಎಂಬಾತ ಬಂಧಿತನಾಗಿದ್ದು, ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದಾನೆ. ತನಿಖೆಯ ವೇಳೆ ಆರೋಪಿ ವಿವಿಧ ಹೆಸರಿನಲ್ಲಿ ಸುಮಾರು 18 ನಕಲಿ ಇ-ಮೇಲ್ ಹಾಗೂ ಇನ್‌ಸ್ಟಾಗ್ರಾಮ್ ಖಾತೆಗಳನ್ನು ರಚಿಸಿದ್ದಿರುವುದು ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿಯಂತೆ, ಆರೋಪಿ ಅಪರಿಚಿತರ ಮದುವೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗಿ, ಮಹಿಳೆಯರ ಫೋಟೋಗಳನ್ನು ಅವರ ಗಮನಕ್ಕೆ ಬಾರದಂತೆ ಸಂಗ್ರಹಿಸಿ, ನಂತರ ಸಾಮಾಜಿಕ ಜಾಲತಾಣಗಳಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ಈ ಕುರಿತು ಭಟ್ಕಳದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿ ಕಾರವಾರ ಜೈಲಿಗೆ ರವಾನಿಸಲಾಗಿದೆ.

