
ಭಟ್ಕಳ:2018–19ರಿಂದ 2022–23ರ ಅವಧಿಯಲ್ಲಿ ಬಿಜೆಪಿ ಆಡಳಿತ ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಭಾಗಕ್ಕೆ ಒಟ್ಟು 87 ಹೊಸ ಬಸ್ಸುಗಳನ್ನು ಖರೀದಿಸಲಾಗಿದ್ದು, ಅದರಲ್ಲಿ ಶಿರಸಿ ಘಟಕಕ್ಕೆ ಮಾತ್ರವೇ 28 ವಾಹನಗಳು ಸೇರಿವೆ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.

ಶನಿವಾರ ಭಟ್ಕಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಮಂಕಾಳ ವೈದ್ಯರು ಶಿರಸಿಯ ಮಾರಿಕಾಂಬಾ ಜಾತ್ರಾ ಪೂರ್ವ ಸಭೆಯಲ್ಲಿ “ಕಳೆದ ಏಳು ವರ್ಷಗಳಲ್ಲಿ ಜಿಲ್ಲೆಗೆ ಒಂದೇ ಒಂದು ಹೊಸ ಬಸ್ ಬಂದಿಲ್ಲ” ಎಂದು ಹೇಳಿದ್ದನ್ನು ಉಲ್ಲೇಖಿಸಿ, ಆ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಆರೋಪಿಸಿದರು. ತಮ್ಮ ಹೇಳಿಕೆಗೆ ಪೂರಕವಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ಉತ್ತರ ಕನ್ನಡ ಜಿಲ್ಲೆಯ ವಾಯವ್ಯ ರಸ್ತೆ ಸಾರಿಗೆ ನಿಗಮದಿಂದ ಪಡೆದ ಅಧಿಕೃತ ದಾಖಲೆಗಳನ್ನು ಅವರು ಸಾರ್ವಜನಿಕವಾಗಿ ಬಿಡುಗಡೆಗೊಳಿಸಿದರು.

ಸಚಿವ ಮಂಕಾಳ ವೈದ್ಯರು ದಾಖಲೆಗಳಿಲ್ಲದೇ ಮಾತನಾಡುವುದಿಲ್ಲ ಎಂದು ಹೇಳಿದ್ದ ಹಿನ್ನೆಲೆಯಲ್ಲಿ, ಈಗ ದಾಖಲೆಗಳ ಮೂಲಕವೇ ಉತ್ತರ ನೀಡುತ್ತಿದ್ದೇನೆ ಎಂದು ಅನಂತಮೂರ್ತಿ ಹೆಗಡೆ ಸ್ಪಷ್ಟಪಡಿಸಿದರು. ಜಾತ್ರೆಯಂತಹ ಧಾರ್ಮಿಕ ವೇದಿಕೆಯಲ್ಲಿ ರಾಜಕೀಯ ಚರ್ಚೆ ಸೂಕ್ತವಲ್ಲವೆಂದು ಆ ವೇಳೆ ಮೌನ ವಹಿಸಿದ್ದೆ, ಆದರೆ ಇದೀಗ ಸತ್ಯವನ್ನು ಜನ ಮುಂದೆ ಇಡಬೇಕಾದ ಅನಿವಾರ್ಯತೆ ಬಂದಿದೆ ಎಂದರು.
ಚುನಾವಣಾ ಸೋಲಿನ ಹಿನ್ನಲೆಯಲ್ಲಿ ಆರೋಪ.
ಮಂಕಿ ಕ್ಷೇತ್ರದ ಚುನಾವಣಾ ಫಲಿತಾಂಶದ ಬಳಿಕ ಸಚಿವ ಮಂಕಾಳ ವೈದ್ಯರು ರಾಜಕೀಯವಾಗಿ ಹತಾಶರಾಗಿದ್ದು, ನಿರಂತರವಾಗಿ ಬಿಜೆಪಿ ವಿರುದ್ಧ ಟೀಕೆ ಮಾಡುವುದನ್ನೇ ರೂಢಿಸಿಕೊಂಡಿದ್ದಾರೆ ಎಂದು ಅನಂತಮೂರ್ತಿ ಹೆಗಡೆ ಆರೋಪಿಸಿದರು. ವಿವಿಧ ವೇದಿಕೆಗಳಲ್ಲಿ ಭಿನ್ನ ನಿಲುವು ಪ್ರದರ್ಶಿಸುವ ಮೂಲಕ ಡಬಲ್ ಸ್ಟ್ಯಾಂಡರ್ಡ್ ತೋರಿಸುತ್ತಿದ್ದಾರೆ ಎಂದು ಟೀಕಿಸಿದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಪ್ರಶ್ನೆ
ಚುನಾವಣಾ ಸಂದರ್ಭದಲ್ಲಿಯೇ ಕ್ಷೇತ್ರಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದಾಗಿ ಭರವಸೆ ನೀಡಿದ್ದ ಸಚಿವ ಮಂಕಾಳ ವೈದ್ಯರು ಇದೀಗ ಆ ವಿಷಯವನ್ನು ಮರೆತಿರುವರೇ ಎಂದು ಅವರು ಪ್ರಶ್ನಿಸಿದರು. ಕುಮಟಾದಲ್ಲಿ ಘೋಷಣೆಗೊಂಡಿದ್ದ ಆಸ್ಪತ್ರೆ ಯೋಜನೆಯೂ ಮುಂದುವರಿಯದೆ ಇರುವುದರಿಂದ ಜಿಲ್ಲೆಯ ಜನರಿಗೆ ಸುಸಜ್ಜಿತ ವೈದ್ಯಕೀಯ ಸೌಲಭ್ಯ ಯಾವಾಗ ದೊರೆಯಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ ಎಂದರು.

ಬೇಡ್ತಿ–ವರದಾ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳ ಬಗ್ಗೆ ಮಾತನಾಡುವ ಸರ್ಕಾರ, ಜನರಿಗೆ ನೇರವಾಗಿ ಉಪಯೋಗವಾಗುವ ಆರೋಗ್ಯ ಮೂಲಸೌಕರ್ಯಕ್ಕೆ ಅನುದಾನ ನೀಡದಿರುವುದೇಕೆ ಎಂದು ಪ್ರಶ್ನಿಸಿದ ಅವರು, ಜಿಲ್ಲೆಗೆ ತಕ್ಷಣವೇ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಒದಗಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಶ್ರೀನಿವಾಸ ನಾಯ್ಕ, ಮಂಜುನಾಥ ನಾಯ್ಕ, ರಮೇಶ ನಾಯ್ಕ, ರಾಘವೇಂದ್ರ ನಾಯ್ಕ, ಗಣೇಶ ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

