ಭಟ್ಕಳ: ಪತ್ರಕರ್ತರು ಯಾವುದೇ ಬಗೆಯ ಒತ್ತಡಗಳಿಗೆ ಒಳಗಾಗದೆ ಸಮಾಜದ ಹಿತಾಸಕ್ತಿಯನ್ನು ಕೇಂದ್ರಬಿಂದು ಮಾಡಿಕೊಂಡು ಪತ್ರಿಕಾ ಧರ್ಮವನ್ನು ಪಾಲಿಸಬೇಕಾದ ಅಗತ್ಯವಿದೆ. ಸತ್ಯನಿಷ್ಠೆಯಿಂದ ದೂರ ಸರಿದ ಲೇಖನಿಗಳು ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಅಪಾಯವಿದೆ ಎಂದು ಬಂಗಾರಮಕ್ಕಿ ಸಂಸ್ಥಾನದ ಶ್ರೀ ಮಾರುತಿ ಗುರೂಜಿ ಆತಂಕ ವ್ಯಕ್ತಪಡಿಸಿದರು.

ನಗರದ ಶ್ರೀ ನಾಗಯಕ್ಷ ಧರ್ಮಾರ್ಥ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ಕಾನಿಪ ಧ್ವನಿ) ಸಂಘಟನೆಯ ಭಟ್ಕಳ ಘಟಕದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಕಾಣಿಸಿಕೊಳ್ಳುವ ಅಸಮಾನತೆ, ಅನ್ಯಾಯ ಹಾಗೂ ಅಕ್ರಮಗಳನ್ನು ಜನರ ಗಮನಕ್ಕೆ ತರುವ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಸ್ತಂಭವಾಗಿರುವ ಪತ್ರಿಕೋದ್ಯಮವು ಜನರಿಗೆ ನೈಜ ಸತ್ಯವನ್ನು ತಲುಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರು ನಿಷ್ಠೆ, ಪ್ರಾಮಾಣಿಕತೆ ಮತ್ತು ಧೈರ್ಯದಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಅವರು ಹೇಳಿದರು.
ಸುದ್ದಿ ಸಂಗ್ರಹ ಮತ್ತು ಪ್ರಸಾರದಲ್ಲಿ ಪತ್ರಕರ್ತರು ಅನೇಕ ಬಾರಿ ಜೀವದ ಹಂಗನ್ನೂ ಲೆಕ್ಕಿಸದೇ ಕೆಲಸ ಮಾಡುತ್ತಾರೆ. ಆದರೆ ಅವರಿಗೂ ಕುಟುಂಬದ ಹೊಣೆಗಾರಿಕೆಗಳಿವೆ ಎಂಬ ಸತ್ಯವನ್ನು ಸರ್ಕಾರ ಅರಿತುಕೊಳ್ಳಬೇಕು. ಸಂವಿಧಾನ ಒದಗಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಪತ್ರಕರ್ತರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಶ್ರೀ ಮಾರುತಿ ಗುರೂಜಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜಸೇವಕ, ಉದ್ಯಮಿ ಗೋವಿಂದ ಪೂಜಾರಿ, ಸಮಾಜದ ಕೊನೆಯ ಸಾಲಿನ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡುವಲ್ಲಿ ಪತ್ರಕರ್ತರ ಪಾತ್ರ ಅನನ್ಯವಾಗಿದೆ. ಪತ್ರಕರ್ತರ ಕುಟುಂಬಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಟ್ರಸ್ಟ್ ಸ್ಥಾಪಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಗಂಗಾಧರ್ ಮೊದಲಿಯರ್ ಮಾತನಾಡಿ, ಕೆಲವು ಕಡೆಗಳಲ್ಲಿ ಪತ್ರಕರ್ತರನ್ನು ಭಯೋತ್ಪಾದಕರಂತೆ ನೋಡುವ ಮನೋಭಾವ ಬೆಳೆದು ಬರುತ್ತಿರುವುದು ದುಃಖಕರ ಸಂಗತಿ ಎಂದರು. ಇಂತಹ ಪರಿಸ್ಥಿತಿಯಲ್ಲಿ ಪತ್ರಕರ್ತರು ತಮ್ಮ ವೃತ್ತಿಪರ ಮೌಲ್ಯಗಳನ್ನು ಕಾಪಾಡಿಕೊಂಡು ದೃಢವಾಗಿ ನಿಲ್ಲಬೇಕಿದೆ. ತಾಂತ್ರಿಕ ಬದಲಾವಣೆಗಳಿಗೆ ತಕ್ಕಂತೆ ಮಾಧ್ಯಮ ಕ್ಷೇತ್ರವೂ ರೂಪಾಂತರಗೊಳ್ಳಬೇಕು. ಇಂತಹ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭಗಳು ಹೊಸ ತಲೆಮಾರಿನ ಪತ್ರಕರ್ತರಿಗೆ ಪ್ರೇರಣೆಯಾಗುತ್ತವೆ ಎಂದು ಹೇಳಿದರು.
ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆ ಕೇವಲ ಮೂರು ವರ್ಷಗಳಲ್ಲಿ 26 ಜಿಲ್ಲೆಗಳವರೆಗೆ ವಿಸ್ತರಿಸಿದೆ. ಪತ್ರಕರ್ತರ ಮಾಸಾಶನ ಸೇರಿದಂತೆ ವಿವಿಧ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ರಾಜ್ಯ ಪ್ರಶಸ್ತಿಗಳನ್ನು ಪ್ರದಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ, ಖ್ಯಾತ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಕಾನಿಪ ಧ್ವನಿ ಕರಾವಳಿ ಕರ್ನಾಟಕ ವಿಭಾಗದ ಅಧ್ಯಕ್ಷ ಕುಮಾರ್ ನಾಯ್ಕ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ನಾಗರಾಜ್ ದೈವಜ್ಞ, ಉಡುಪಿ ಜಿಲ್ಲಾಧ್ಯಕ್ಷ ದಾಮೋದರ ಮೊಗವೀರ, ಅಂಕೋಲಾ ತಾಲೂಕು ಅಧ್ಯಕ್ಷ ಮಾರುತಿ, ಶಿರಸಿ ತಾಲೂಕು ಅಧ್ಯಕ್ಷ ರಾಜೇಶ್ ಮೊಗೇರ್, ಮುಂಡಗೋಡ್ ತಾಲೂಕು ಅಧ್ಯಕ್ಷ ಸಂತೋಷ್ ದೈವಜ್ಞ, ಭಟ್ಕಳ ತಾಲೂಕು ಪದಾಧಿಕಾರಿಗಳಾದ ಶಂಕರ ನಾಯ್ಕ, ಉಲ್ಲಾಸ್ ಶಾನ್ ಬಾಗ್, ನಸೀಬ್ ಮುಲ್ಲಾ ಘನಿ, ಜಾವಿದ್ ಸಿಂಗೇರಿ, ರಾಜ್ಯ ಉಪಾಧ್ಯಕ್ಷ ಡಾ.ಎಸ್.ಎಸ್.ಪಾಟೀಲ್, ಡಿಎಫ್‌ಒ ಯೋಗೇಶ್, ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ್ ನಾವುಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

