ಭಟ್ಕಳ:ಕಾರ್ಯನಿರತ ಪತ್ರಕರ್ತರ ಧ್ವನಿ (ರಿ), ಬೆಂಗಳೂರು ಹಾಗೂ ಭಟ್ಕಳ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ನಾಗಯಕ್ಷೆ ಸಭಾಭವನದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಂಗಾಧರ ನಾಯ್ಕ ಮತ್ತು ಶ್ರೀಧರ ಶೇಟ್ ಅವರಿಗೆ ಪ್ರತಿಷ್ಠಿತ ಕರ್ನಾಟಕ ಸಾಧಕ ಶ್ರೇಷ್ಠ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಹಿತ್ಯ, ಸಂಗೀತ ಮತ್ತು ಸಂಘಟನಾ ಕ್ಷೇತ್ರಗಳಲ್ಲಿ ದೀರ್ಘಕಾಲದ ಸೇವೆ ಸಲ್ಲಿಸಿರುವ ಗಂಗಾಧರ ನಾಯ್ಕ ಅವರು ಕನ್ನಡ ಸಾಹಿತ್ಯ ಪರಿಷತ್ ಭಟ್ಕಳ ತಾಲೂಕು ಘಟಕದ ಅಧ್ಯಕ್ಷರಾಗಿ ಎರಡನೇ ಅವಧಿಗೂ ಕಾರ್ಯನಿರ್ವಹಿಸುತ್ತಿದ್ದು, ಪರಿಷತ್ತಿನ ಚಟುವಟಿಕೆಗಳನ್ನು ತಾಲೂಕಿನ ಮನೆಮನೆಗಳಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಮೂಲಕ ಜಿಲ್ಲಾಮಟ್ಟದಲ್ಲಿ ಅತ್ಯಧಿಕ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಂಘಟಿಸಿದಕ್ಕಾಗಿ ‘ಸಾಹಿತ್ಯ ಸಾರಥ್ಯ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಸಾಹಿತಿಯಾಗಿ ‘ಭಾನುಭಾವ’ ಎಂಬ ಹನಿಗವಿತೆಗಳ ಸಂಕಲನ ಹಾಗೂ ಆಚರಣೆ-ಸಂಪ್ರದಾಯಗಳ ಹಿಂದಿನ ವೈಚಾರಿಕ ನೆಲೆ ವಿವರಿಸುವ ‘ಆಚಾರ ಸುವಿಚಾರ’ ಕೃತಿಗಳನ್ನು ಪ್ರಕಟಿಸಿರುವ ಅವರು, ಗಾಯನ ಕ್ಷೇತ್ರದಲ್ಲೂ ತಮ್ಮದೇ ಆದ ಗುರುತು ಮೂಡಿಸಿದ್ದಾರೆ.

ಭಟ್ಕಳ ತಾಲೂಕಿನಲ್ಲಿ ಮೊದಲ ಬಾರಿಗೆ ಈ ಟಿವಿಯ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಹಾಡಿ, ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ಪ್ರಶಂಸೆ ಪಡೆದ ಸಾಧನೆಗೂ ಪಾತ್ರರಾಗಿದ್ದಾರೆ. ನಿರೂಪಕ, ಉಪನ್ಯಾಸಕ, ಸಂಘಟಕ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಬಹುಮುಖ ಪ್ರತಿಭೆ ತೋರಿದ ಹಿನ್ನೆಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ), ಬೆಂಗಳೂರು ಸಂಸ್ಥೆಯು ಅವರಿಗೆ ಕರ್ನಾಟಕ ಸಾಧಕ ಶ್ರೇಷ್ಠ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಇನ್ನೊಬ್ಬ ಪ್ರಶಸ್ತಿ ಪುರಸ್ಕೃತರಾದ ಶ್ರೀಧರ ಶೇಟ್ ಅವರು ಶಿಕ್ಷಕ, ಸಾಹಿತಿ, ವ್ಯಂಗ್ಯಚಿತ್ರಕಾರ, ಚಿತ್ರಕಲಾವಿದ ಹಾಗೂ ನಿರೂಪಕರಾಗಿ ಬಹುಮುಖ ಪ್ರತಿಭೆಯಿಂದ ಪರಿಚಿತರಾಗಿದ್ದಾರೆ. ಉತ್ತಮ ಶಿಕ್ಷಕರಾಗಿಯೂ ಸಂಪನ್ಮೂಲ ವ್ಯಕ್ತಿಯಾಗಿಯೂ ಸಲ್ಲಿಸಿದ ಸೇವೆಗೆ 2025ನೇ ಸಾಲಿನ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಇವರ ‘ಬೇಲಿಯ ಹೂವು’ ಕವಿತೆ ಐಸಿಎಸ್‌ಇ ಪಠ್ಯಕ್ರಮದ 5ನೇ ತರಗತಿಯ ‘ಕನ್ನಡ ಚಂದನ’ ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ. Opಸಾಹಿತ್ಯ ಕ್ಷೇತ್ರದಲ್ಲಿ ಧ್ವನಿಪೂರ್ಣ ಹಾಗೂ ಗಟ್ಟಿಯಾದ ಕವಿಯಾಗಿ ನಾಡಿನಾದ್ಯಂತ ಗುರುತಿಸಿಕೊಂಡಿರುವ ಶ್ರೀಧರ ಶೇಟ್ ಅವರಿಗೆ, ಭಟ್ಕಳ ತಾಲೂಕು ಒಂಭತ್ತನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವೂ ಲಭಿಸಿದೆ. ಇವರ ಬಹುಮುಖ ಸಾಧನೆಯನ್ನು ಪರಿಗಣಿಸಿ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ), ಬೆಂಗಳೂರು ಸಂಸ್ಥೆಯು ಕರ್ನಾಟಕ ಸರ್ಕಾರಿ ಸೇವಾ ಶ್ರೇಷ್ಠ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದೆ.

