ಭಟ್ಕಳ:ಭಟ್ಕಳ ತಾಲ್ಲೂಕಿನ ಗುಲ್ಮಿ ಸೇತುವೆ ಸಮೀಪದ ರೈಲ್ವೆ ಮಾರ್ಗದಲ್ಲಿ ಬುಧವಾರ ಮಧ್ಯಾಹ್ನ ಯುವಕನೊಬ್ಬರ ಮೃತದೇಹ ಪತ್ತೆಯಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮೃತ ವ್ಯಕ್ತಿಯನ್ನು ಗುಲ್ಮಿ ನಿವಾಸಿ ಮುಹಮ್ಮದ್ ನಾಸಿರ್ ಶೇಖ್ ಹುಸೇನ್ (33) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ರೈಲು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ರೈಲ್ವೆ ಹಳಿಗಳ ಮೇಲೆ ಮೃತದೇಹ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದೇಹದ ಮೇಲೆ ಗಂಭೀರ ಗಾಯಗಳು ಹಾಗೂ ಹರಿದ ಬಟ್ಟೆಗಳು ಕಂಡುಬಂದಿವೆ. ಈ ಹಿನ್ನೆಲೆ ರೈಲು ಅಪಘಾತವೇ ಸಾವಿಗೆ ಕಾರಣವಾಗಿರಬಹುದೆಂಬ ಅನುಮಾನ ಬಲಗೊಂಡಿದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ರೈಲ್ವೆ ಪೊಲೀಸ್ ಸಿಬ್ಬಂದಿ ಹಾಗೂ ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದ್ದು, ಅಪಘಾತವೋ ಅಥವಾ ಇತರೆ ಕಾರಣಗಳಿವೆಯೋ ಎಂಬುದು ತನಿಖೆಯ ಬಳಿಕ ಸ್ಪಷ್ಟವಾಗಲಿದೆ.

