ಶಿರಸಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಹಳೆಯ ಫೋಟೊಗಳನ್ನು ಆಧಾರವಾಗಿಸಿಕೊಂಡು ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿ ನಿಂದನೆ ಮಾಡುವ ಪ್ರವೃತ್ತಿ ಅಸಹ್ಯಕರವಾಗಿದ್ದು, ಇದು ಹಿರಿಯ ರಾಜಕಾರಣಿಗಳಿಗೆ ಶೋಭಿಸುವುದಲ್ಲ ಎಂದು ಬಿಜೆಪಿ ಜಿಲ್ಲಾ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸಿದ್ದಾಪುರ ತಾಲೂಕಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿರಲಿ, ಯಾವುದೇ ಸಮುದಾಯಕ್ಕೆ ಸೇರಿದ್ದರೂ ಕಾನೂನಿನ ಪ್ರಕಾರ ಶಿಕ್ಷೆ ಆಗಲೇಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಅಪರಾಧ ಎಸಗಿರುವ ವ್ಯಕ್ತಿಗಳು ಈ ಹಿಂದೆ ರಾಜಕೀಯ ಮುಖಂಡರೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ ಎಂಬ ಕಾರಣಕ್ಕೆ, ಆ ನಾಯಕರನ್ನೇ ಅಪರಾಧಕ್ಕೆ ತಳುಕು ಹಾಕುವ ಮನೋಭಾವ ಸರಿಯಲ್ಲ ಎಂದು ಹೇಳಿದ್ದಾರೆ.
ಸಾರ್ವಜನಿಕ ಜೀವನದಲ್ಲಿರುವವರು ಪ್ರತಿದಿನವೂ ಅನೇಕ ಜನರನ್ನು ಭೇಟಿಯಾಗುವುದು ಸಹಜ. ಸಿದ್ದಾಪುರ ಪ್ರಕರಣದ ಆರೋಪಿಯಾಗಿರುವ ಜ್ಯೋತಿಷಿಯು ನನ್ನ ಜೊತೆಗೆ ಮಾತ್ರವಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕ ಸಿಪಿ ಯೋಗೇಶ್ವರ ಸೇರಿದಂತೆ ಹಲವರೊಂದಿಗೆ ಫೋಟೊ ತೆಗೆಸಿಕೊಂಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಇದನ್ನೇ ಆಧಾರವಾಗಿ ಎಲ್ಲರ ಮೇಲೂ ಆರೋಪ ಹೊರಿಸುವುದು ತೀರಾ ಅಸಂಗತವಾದ ರಾಜಕೀಯ ಎಂದು ಅನಂತಮೂರ್ತಿ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.
ಯಾರಾದರೂ ತಪ್ಪು ಮಾಡಿದರೆ ಅದರ ಹೊಣೆಗಾರಿಕೆ ಅವರದ್ದೇ ಆಗಬೇಕು. ಕೇವಲ ಫೋಟೊಗಳ ಆಧಾರದಲ್ಲಿ ಅವರ ಖಾಸಗಿ ಬದುಕಿನ ದೋಷಗಳು ಅಥವಾ ಕ್ರಿಮಿನಲ್ ಕೃತ್ಯಗಳಿಗೆ ರಾಜಕೀಯ ನಾಯಕರನ್ನು ಹೊಣೆ ಮಾಡುವುದು ಮೂರ್ಖತನವಾಗಿದೆ. ಅಪರಾಧವನ್ನು ಅಪರಾಧವನ್ನಾಗಿಯೇ ನೋಡುವ ಸಂಸ್ಕಾರ ಸಮಾಜದಲ್ಲಿ ಬೆಳೆಬೇಕು ಎಂದು ಅವರು ಹೇಳಿದ್ದಾರೆ.
ಈ ಕುರಿತು ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಶವದ ಮುಂದೆಯೇ ರಾಜಕೀಯ ಲಾಭ ಹುಡುಕುವ ಪ್ರವೃತ್ತಿ ಸ್ವಸ್ಥ ಸಮಾಜ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿರುವ ಅಭಿಪ್ರಾಯವನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಎಂದು ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ. ಹಲವು ದಶಕಗಳ ರಾಜಕೀಯ ಅನುಭವ ಹೊಂದಿರುವ ಹರಿಪ್ರಸಾದ್ ಅವರಿಂದ ಈ ರೀತಿಯ ಅಸಂಯಮಿತ ನಡೆ ನಿರೀಕ್ಷಿಸಲಾಗುವುದಿಲ್ಲ ಎಂದೂ ಅವರು ಟೀಕಿಸಿದ್ದಾರೆ.
ಸ್ಥಳೀಯ ಮಟ್ಟದಲ್ಲೂ ಕೆಲ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಫೋಟೊಗಳನ್ನು ಹರಿಬಿಡುತ್ತಿರುವುದು ಅವರ ರಾಜಕೀಯ ಬುದ್ಧಿವಂತಿಕೆಯನ್ನು ತೋರಿಸುತ್ತದೆ. ಒಟ್ಟಾರೆ ಕಾಂಗ್ರೆಸ್ ಪಕ್ಷದ ಮನಸ್ಥಿತಿ ಈ ರೀತಿಯದ್ದೇ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ ಎಂದು ಅನಂತಮೂರ್ತಿ ಹೆಗಡೆ ಕಿಡಿಕಾರಿದ್ದಾರೆ.
