
ಅಂಕೋಲಾ:ಸಂಸ್ಕೃತಿ, ಶಿಕ್ಷಣ ಮತ್ತು ಶಾಂತಿಯ ನೆಲವೆಂದು ಪರಿಚಿತವಾಗಿರುವ ಅಂಕೋಲಾ ತಾಲೂಕಿನ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಅಕ್ರಮ ಜೂಜಾಟ ಚಟುವಟಿಕೆಗಳು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ಜೂಜಾಟದ ಅಡ್ಡೆಗಳು ನಿರ್ಬಂಧವಿಲ್ಲದೇ ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.ಸಾರ್ವಜನಿಕ ಕಾರ್ಯಕ್ರಮಗಳು, ಜಾತ್ರೆ–ಹಬ್ಬಗಳ ಸಮಯದಲ್ಲಿ ಜೂಜಾಟದ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎನ್ನುವುದು ಸ್ಥಳೀಯರ ಅಸಮಾಧಾನ. ಕೆಲ ಪ್ರಭಾವಿ ವ್ಯಕ್ತಿಗಳ ಆಶ್ರಯದಲ್ಲಿ ಈ ಅಕ್ರಮ ದಂಧೆಗಳು ನಡೆಯುತ್ತಿವೆ ಎಂಬ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ.

ಇತ್ತೀಚೆಗೆ ಲಕ್ಷ್ಮೇಶ್ವರದ ದೈವಜ್ಞ ಕಲ್ಯಾಣ ಮಂಟಪದ ಸಮೀಪ ನಡೆಯುತ್ತಿದ್ದ ಜೂಜಾಟದ ಅಡ್ಡೆಯ ಮೇಲೆ ಅಂಕೋಲಾ ಪೊಲೀಸರು ದಾಳಿ ನಡೆಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಆರು ಮಂದಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ಅವರಿಂದ ನಗದು ಹಣ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ವೇಳೆ ಜೊಯಿಡಾ ತಾಲೂಕಿನ ಉಳವಿ ಭಾಗದಲ್ಲಿ ಜಾತ್ರೆ ಸಂದರ್ಭ ನಡೆದ ‘ಅಂದರ್–ಬಾಹರ್’ ಜೂಜಾಟದ ಸ್ಥಳಗಳ ಮೇಲೂ ಪೊಲೀಸರು ದಾಳಿ ನಡೆಸಿದ್ದು, ವಿವಿಧ ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಹತ್ತು ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ದಾಳಿಯ ವೇಳೆ ಗಣನೀಯ ಪ್ರಮಾಣದ ನಗದು ಹಣ ವಶವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕು ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಪಡೆದ ಪ್ರದೇಶವಾಗಿದ್ದು, ಅನೇಕ ಶಿಕ್ಷಕ ಕುಟುಂಬಗಳು ಹಾಗೂ ಉನ್ನತ ಹುದ್ದೆಯಲ್ಲಿರುವ ಗಣ್ಯರು ಇಲ್ಲಿ ವಾಸವಾಗಿದ್ದಾರೆ. ಇಂತಹ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳು ತಲೆ ಎತ್ತುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
‘ಅಂದರ್–ಬಾಹರ್’, ಇಸ್ಪೀಡ್, ಕೋಳಿ ಅಂಕ ಸೇರಿದಂತೆ ಜೂಜಾಟದ ಆಟಗಳು ದಿನೇ ದಿನೇ ವ್ಯಾಪಕವಾಗುತ್ತಿದ್ದು, ಇವುಗಳಿಗೆ ಬೆಂಬಲ ನೀಡುವವರ ಕುರಿತು ಪ್ರಶ್ನೆಗಳು ಉದ್ಭವಿಸುತ್ತಿವೆ. ಪ್ರಜ್ಞಾವಂತರು ಈ ವಿಚಾರದಲ್ಲಿ ಮೌನ ವಹಿಸಿರುವುದೇಕೆ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ಪೊಲೀಸ್ ಇಲಾಖೆ ಗಂಭೀರವಾಗಿ ಮುಂದಾದರೆ ಅಕ್ರಮ ಜೂಜಾಟಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ ಎಂಬ ವಿಶ್ವಾಸ ಸ್ಥಳೀಯರಲ್ಲಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನವಿದ್ದು, ಸಾರ್ವಜನಿಕ ಸಹಕಾರದೊಂದಿಗೆ ಪರಿಸ್ಥಿತಿ ನಿಯಂತ್ರಣ ಸಾಧ್ಯವೆನ್ನಲಾಗುತ್ತಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜನರ ಆಕ್ರೋಶ ಸ್ಫೋಟಗೊಳ್ಳುವ ಸಾಧ್ಯತೆಯೂ ತಳ್ಳಿಹಾಕಲಾಗದು ಎಂಬ ಎಚ್ಚರಿಕೆಯ ಮಾತುಗಳು ಕೇಳಿಬರುತ್ತಿವೆ.
