
ಭಟ್ಕಳ:ಜನತಾದಳ (ಸೆಕ್ಯುಲರ್) ಪಕ್ಷದ ಉತ್ತರ ಕನ್ನಡ ಜಿಲ್ಲಾ ಘಟಕಕ್ಕೆ ನೂತನ ನಾಯಕತ್ವ ಘೋಷಣೆಯಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹಿರಿಯ ನಾಯಕ ಎಚ್.ಡಿ. ದೇವೇಗೌಡ ಅವರ ಮಾರ್ಗದರ್ಶನದಲ್ಲಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಅನುಮೋದನೆಯೊಂದಿಗೆ, ಸೂರಜ್ ನಾಯ್ಕ ಸೋನಿ ಅವರನ್ನು ಉತ್ತರ ಕನ್ನಡ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಬೆಂಗಳೂರಿನ ಜೆಪಿ ಭವನದಲ್ಲಿರುವ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ, ಪಕ್ಷದ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ನೇಮಕಾತಿ ಪತ್ರವನ್ನು ಸೂರಜ್ ನಾಯ್ಕ ಸೋನಿ ಅವರಿಗೆ ಹಸ್ತಾಂತರಿಸಲಾಯಿತು. ಈ ವೇಳೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.

ರಾಜ್ಯ ಮಟ್ಟದಲ್ಲಿ ಕೋರ್ ಕಮಿಟಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಸೂರಜ್ ನಾಯ್ಕ ಸೋನಿ ಅವರು, ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ನಾಯಕರಾಗಿದ್ದಾರೆ. ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಇವರು, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಬಲವರ್ಧನೆ ಹಾಗೂ ಪುನರ್ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸುವ ವಿಶ್ವಾಸವನ್ನು ಪಕ್ಷದ ಹಿರಿಯರು ವ್ಯಕ್ತಪಡಿಸಿದ್ದಾರೆ.

ನೂತನ ಜವಾಬ್ದಾರಿಯನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಸೂರಜ್ ನಾಯ್ಕ ಸೋನಿ, “ನನ್ನ ಮೇಲೆ ಪಕ್ಷ ಇಟ್ಟಿರುವ ನಂಬಿಕೆಗೆ ನಾನು ಸದಾ ಋಣಿಯಾಗಿರುತ್ತೇನೆ. ನನ್ನೊಂದಿಗೆ ನಿಂತ ಎಲ್ಲ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು,” ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಪಕ್ಷದ ತತ್ವ ಮತ್ತು ಸಿದ್ಧಾಂತಗಳನ್ನು ಮನೆಮನೆಗೂ ತಲುಪಿಸಿ, ಜಿಲ್ಲೆಯಲ್ಲಿ ಜೆಡಿಎಸ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸುವುದಾಗಿ ಅವರು ತಿಳಿಸಿದರು.ಸೂರಜ್ ನಾಯ್ಕ ಸೋನಿ ಅವರ ನೇಮಕಕ್ಕೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದು, ಪಕ್ಷದ ಒಳಗೆ ಹೊಸ ಉತ್ಸಾಹ ಮೂಡಿದೆ.

