ಭಟ್ಕಳ: ಮದುವೆ ಸಿದ್ಧತೆಯ ಸಂಭ್ರಮದ ನಡುವೆ ಚಿನ್ನಾಭರಣ ಖರೀದಿಸಲು ಭಟ್ಕಳಕ್ಕೆ ಬಂದಿದ್ದ ಕುಮಟಾ ಮೂಲದ ಯುವಕನ ನಾಪತ್ತೆ ಪ್ರಕರಣವು ಸುಮಾರು ಮೂರು ತಿಂಗಳ ನಂತರ ಬೆಳಕಿಗೆ ಬಂದಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಜಾಕೀರ ಬೇಗ (33) ಎಂಬ ಯುವಕನನ್ನು ತುಮಕೂರಿನಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ.

ಜಾಕೀರ ಬೇಗ ಅವರು ದಿನಾಂಕ 18-10-2025ರಂದು ಮದುವೆಗಾಗಿ ಚಿನ್ನ ಖರೀದಿಸುವ ಉದ್ದೇಶದಿಂದ ಅತ್ತಿಗೆ ಹಾಗೂ ಸಂಬಂಧಿಕರೊಂದಿಗೆ ಕುಮಟಾದಿಂದ ಭಟ್ಕಳಕ್ಕೆ ಆಗಮಿಸಿದ್ದರು. ಮಧ್ಯಾಹ್ನ ಸಮಯದಲ್ಲಿ ನೂರಪಳ್ಳಿ ಮಸೀದಿಗೆ ನಮಾಜ್‌ಗೆ ತೆರಳಿದ ಅವರು, ಬಳಿಕ ಸಂಬಂಧಿಕರ ಮನೆಗೂ ಮರಳದೆ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದರಿಂದ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿತ್ತು.
ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತೀವ್ರ ತನಿಖೆಗೆ ಮುಂದಾಗಿದ್ದರು. ತಾಂತ್ರಿಕ ಮಾಹಿತಿ ಪರಿಶೀಲನೆಯ ವೇಳೆ ಜಾಕೀರ ಅವರು ತಮ್ಮ ಮೊಬೈಲ್ ಫೋನ್ ಅನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದ್ದು, ಅದೇ ಪ್ರಮುಖ ಸುಳಿವಾಗಿ ಪರಿಣಮಿಸಿತು.
ಈ ಮಾಹಿತಿಯ ಆಧಾರದಲ್ಲಿ ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ ಹಾಗೂ ಪಿಎಸ್‌ಐ ನವೀನ ನಾಯ್ಕ ಅವರ ನೇತೃತ್ವದ ತಂಡ ತನಿಖೆಯನ್ನು ಮುಂದುವರಿಸಿ ತುಮಕೂರಿಗೆ ತೆರಳಿತು. ಅಲ್ಲಿ ಜಾಕೀರ ಬೇಗ ಅವರು ಕಾರ್ಖಾನೆಯೊಂದರಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವುದು ಪತ್ತೆಯಾಯಿತು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿ ಮದುವೆ ಸಮೀಪದಲ್ಲಿದ್ದ ಸಂದರ್ಭದಲ್ಲೇ ಎಲ್ಲವನ್ನೂ ಬಿಟ್ಟು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವುದು ಅಚ್ಚರಿಯನ್ನು ಮೂಡಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ನವೀನ್ ನಾಯ್ಕ್, ಸಿಬ್ಬಂದಿಗಳಾದ ರವಿ ಪಟಗಾರ, ದೇವು ನಾಯ್ಕ್, ಕಾಶಿನಾಥ್ ಹಾಗೂ ತಾಂತ್ರಿಕ ವಿಭಾಗದ ಉದಯ್ ಮತ್ತು ಬಬನ್ ಕದಂ ಅವರನ್ನೊಳಗೊಂಡ ತಂಡವು ಈ ಸವಾಲಿನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದೆ.
