
ಭಟ್ಕಳ: ಮಂಗಳೂರು ಹೊರವಲಯದಲ್ಲಿ ಮಂಗಳವಾರ ಸಂಭವಿಸಿದ ತೀವ್ರ ರಸ್ತೆ ಅಪಘಾತದಲ್ಲಿ ಭಟ್ಕಳ ಮೂಲದ ಯುವ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ.
ಮೃತನನ್ನು ಭಟ್ಕಳದ ಸಮೀರ್ ಶಾಬಂದ್ರಿ ಅವರ ಪುತ್ರ ಇಫಾಮ್ ಶಾಬಂದ್ರಿ (18) ಎಂದು ಗುರುತಿಸಲಾಗಿದೆ.

ಇಫಾಮ್ ಅವರು ತಮ್ಮ ಸ್ನೇಹಿತರೊಂದಿಗೆ ಭಟ್ಕಳದಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ, ಎದುರಿನಿಂದ ಬಂದ ಮತ್ತೊಂದು ಕಾರಿನೊಂದಿಗೆ ಡಿಕ್ಕಿ ಸಂಭವಿಸಿದ ಪರಿಣಾಮ ಈ ದುರ್ಘಟನೆ ನಡೆದಿದೆ.
ಡಿಕ್ಕಿಯ ತೀವ್ರತೆಯಿಂದ ಇಫಾಮ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅದೇ ವಾಹನದಲ್ಲಿದ್ದ ಇತರ ಸ್ನೇಹಿತರು ಯಾವುದೇ ಗಂಭೀರ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪಘಾತದ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
